ADVERTISEMENT

ಗಗನಚುಕ್ಕಿ ಜಲಪಾತ: ಸ್ವಚ್ಛತೆ, ಶೌಚಾಲಯ ಸೌಲಭ್ಯ

‘ಪ್ರಜಾವಾಣಿ’ ವರದಿಗೆ ಎಚ್ಚೆತ್ತ ಅಧಿಕಾರಿಗಳು, 300ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 13:32 IST
Last Updated 31 ಜುಲೈ 2018, 13:32 IST
ಮಳವಳ್ಳಿ ತಾಲ್ಲೂಕು ಗಗನಚುಕ್ಕಿ ಜಲಪಾತದ ಸಮೀಪ ಬೆಳೆದಿದ್ದ ಗಿಡಗಂಟಿ ತೆರೆವುಗೊಳಿಸುತ್ತಿರುವ ಕಾರ್ಮಿಕರು
ಮಳವಳ್ಳಿ ತಾಲ್ಲೂಕು ಗಗನಚುಕ್ಕಿ ಜಲಪಾತದ ಸಮೀಪ ಬೆಳೆದಿದ್ದ ಗಿಡಗಂಟಿ ತೆರೆವುಗೊಳಿಸುತ್ತಿರುವ ಕಾರ್ಮಿಕರು   

ಮಂಡ್ಯ: ಮಳವಳ್ಳಿ ತಾಲ್ಲೂಕಿನ ವಿಶ್ವ ಪ್ರಸಿದ್ಧ ಗಗನಚುಕ್ಕಿ ಜಲಪಾತದ ಬಳಿ ಪ್ರವಾಸಿಗರ ಅನುಕೂಲಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಮೂಲಸೌಲಭ್ಯ ಒದಗಿಸಿದೆ.

ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಗಗನಚುಕ್ಕಿ ಜಲಪಾತ ಧುಮ್ಮಿಕ್ಕುತ್ತಿದೆ. ಜಲಪಾತ ಭೋರ್ಗರೆಯುತ್ತಿದ್ದು ದೇಶದ ವಿವಿಧ ಭಾಗಗಳ ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿದೆ. ವಿದೇಶಿ ಪ್ರವಾಸಿಗರೂ ಗಗನಚುಕ್ಕಿ ಜಲಪಾತವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಆದರೆ ಜಲಪಾತದ ಸಮೀಪ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಪ್ರವಾಸಿಗರಿಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಜುಲೈ 13ರಂದು ‘ಗಗನಚುಕ್ಕಿಯಲ್ಲಿ ಕುಡಿಯುವ ನೀರಿಲ್ಲ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿಗೆ ಎಚ್ಚೆತ್ತುಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಲಪಾತದ ಸ್ಥಳದಲ್ಲಿ ಮೂಲ ಸೌಲಭ್ಯ ಕಲ್ಪಿಸಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಉಚಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ನೀರಿನ ಪೂರೈಕೆ ಇಲ್ಲದೆ ಸ್ಥಗಿತಗೊಂಡಿದ್ದ ಶೌಚಾಲಯಕ್ಕೆ ನೀರು ಪೂರೈಕೆ ಮಾಡಲಾಗಿದೆ. ಒಂದು ಸಾವಿರ ವಾಹನ ನಿಲುಗಡೆಗೆ ವಿಶಾಲ ವಾಹನಾ ನಿಲುಗಡೆ ಸ್ಥಳದ ಅಭಿವೃದ್ದಿ ಮಾಡಲಾಗಿದೆ. ಮಳವಳ್ಳಿ ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಒಬ್ಬರು ವೈದ್ಯರು ಹಾಗೂ ಇತರೆ ಸಹಾಯಕ ಸಿಬ್ಬಂದಿಗಳನ್ನೊಳಗೊಂಡ ತಾತ್ಕಾಲಿಕ ಆಸ್ಪತ್ರೆ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ.

ADVERTISEMENT

ಗಗನಚುಕ್ಕಿ ಜಲಪಾತ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಗಿದೆ. ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಲಾಗಿದ್ದು, ಸ್ವಚ್ಛತೆ ಕಾಪಾಡಲಾಗಿದೆ. ಜಲಪಾತವನ್ನು ವೀಕ್ಷಿಸಲು ಅನುವು ಮಾಡಿಕೊಡುವ ಸಲುವಾಗಿ ಸುಮಾರು 300ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರವಾಸಿ ಮಿತ್ರ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಸರತಿ ಸಾಲಿನಲ್ಲಿ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ನಂತರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶೀಘ್ರ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಗಗನಚುಕ್ಕಿ ಜಲಪಾತ ಪ್ರದೇಶಕ್ಕೆ ತುರ್ತಾಗಿ ಸೌಲಭ್ಯ ಒದಗಿಸಲು ನಿರ್ದೇಶನ ನೀಡಿದ್ದರು.

‘ಪ್ರವಾಸಿಗರು ಜಲಪಾತ ವೀಕ್ಷಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಇಲಾಖಾ ಅಧಿಕಾರಿಗಳ ಸಹಯೋಗದಲ್ಲಿ ವ್ಯವಸ್ಥಿತಾಗಿ ಸೌಲಭ್ಯ ಕಲ್ಪಿಸಲಾಗಿದೆ. ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಾರದ ಹರೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.