ಮಂಡ್ಯ: ತಾಲ್ಲೂಕಿನ ಕೆರಗೋಡು ಹೋಬಳಿಯ ಬಿ.ಹೊಸೂರು ಕಾಲೊನಿಯಲ್ಲಿ ‘ಗಾಂಧಿ ಭವನ’ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಈ ಭವ್ಯ ಕಟ್ಟಡ ನಿರುಪಯುಕ್ತವಾಗಿದ್ದು, ಅನಾಥ ಸ್ಥಿತಿಯಲ್ಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಗಾಂಧಿ ಭವನ ನಿರ್ಮಾಣಕ್ಕಾಗಿ ಬಿ.ಹೊಸೂರು ಗ್ರಾಮದ ಸ.ನಂ.53/7ರಲ್ಲಿ 36 ಗುಂಟೆ ಜಮೀನು ಜಿಲ್ಲಾಡಳಿತದಿಂದ ಮಂಜೂರಾಗಿತ್ತು.
ರಾಜ್ಯದಾದ್ಯಂತ ಗಾಂಧಿ ಭವನ ನಿರ್ಮಾಣಕ್ಕೆ ತಲಾ ಕಟ್ಟಡಕ್ಕೆ ₹3 ಕೋಟಿಯನ್ನು ಸರ್ಕಾರ ನಿಗದಿಪಡಿಸಿತ್ತು. ಅದರಂತೆ ವಾರ್ತಾ ಇಲಾಖೆಯಿಂದ ಮಂಡ್ಯ ಜಿಲ್ಲಾಧಿಕಾರಿ ಖಾತೆಗೆ 2016ರಲ್ಲಿ ಚೆಕ್ ಮೂಲಕ ₹20 ಲಕ್ಷ ಮತ್ತು ಆನ್‌ಲೈನ್ ಮೂಲಕ ₹2.80 ಕೋಟಿ ಸೇರಿದಂತೆ ಒಟ್ಟು ₹3 ಕೋಟಿ ಬಿಡುಗಡೆಯಾಗಿತ್ತು.
2019ರಲ್ಲಿ ನಿರ್ಮಿತಿ ಕೇಂದ್ರದಿಂದ ₹3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು. 2020ರಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ₹2.25 ಕೋಟಿ ಮತ್ತು 2024ರಲ್ಲಿ ₹50 ಲಕ್ಷ ಸೇರಿದಂತೆ ಒಟ್ಟು ₹2.75 ಕೋಟಿ ನೀಡಲಾಗಿತ್ತು.
ದೂಳು ತಿನ್ನುತ್ತಿರುವ ಕಟ್ಟಡ:
ಗಾಂಧಿ ಭವನವು ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಸುತ್ತಲೂ ಕಾಂಪೌಂಡ್, ಹೊರಗೋಡೆಯಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ‘ಉಪ್ಪಿನ ಸತ್ಯಾಗ್ರಹ (ದಂಡಿ ಮಾರ್ಚ್) ಬಿಂಬಿಸುವ ಉಬ್ಬು ಕಲಾಕೃತಿ ಗಮನ ಸೆಳೆಯುವಂತಿದೆ. ಆವರಣದಲ್ಲಿರುವ ಗಿಡ–ಮರಗಳು, ಆಲಂಕಾರಿಕ ಸಸಿಗಳು, ಹಸಿರು ಹುಲ್ಲಿನ ನೆಲಹಾಸು ಕಟ್ಟಡದ ಸೌಂದರ್ಯಕ್ಕೆ ಮೆರುಗು ನೀಡಿವೆ.
‘ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಸೂಕ್ತ ನಿರ್ವಹಣೆಯಿಲ್ಲದೆ ಭವ್ಯ ಕಟ್ಟಡ ದೂಳು ಹಿಡಿದು ಹಾಳಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುವ ಮುನ್ನ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಲಿ’ ಎಂದು ಬಿ.ಹೊಸೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗಾಂಧಿ ಭವನದಲ್ಲಿ ಬಾಕಿ ಉಳಿದ ಸಣ್ಣ ಪುಟ್ಟ ಕಾಮಗಾರಿಗೆ ₹20 ಲಕ್ಷ ಅನುದಾನ ಬೇಕಾಗಿದ್ದು ಹಣ ಬಿಡುಗಡೆಗೆ ವಾರ್ತಾ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆಎಸ್.ಎಚ್. ನಿರ್ಮಲ ಸಹಾಯಕ ನಿರ್ದೇಶಕಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
₹20 ಲಕ್ಷ ವ್ಯಪಗತ! ಲಭ್ಯ
ದಾಖಲೆಗಳ ಪ್ರಕಾರ ಜಿಲ್ಲಾಧಿಕಾರಿ ಕಚೇರಿಗೆ ವಾರ್ತಾ ಇಲಾಖೆಯು 2016ರಲ್ಲಿ ನೀಡಿದ್ದ ₹20 ಲಕ್ಷದ ಚೆಕ್ ಅನ್ನು ಸಕಾಲದಲ್ಲಿ ಡ್ರಾ ಮಾಡಿಕೊಳ್ಳದ ಕಾರಣ ಮೊತ್ತ ವ್ಯಪಗತವಾಗಿದೆ. ಅಂದರೆ ₹20 ಲಕ್ಷ ವಾರ್ತಾ ಇಲಾಖೆ ಅಕೌಂಟ್‌ನಲ್ಲೇ ಉಳಿದುಕೊಂಡಿದೆ. ಇದಕ್ಕೆ ಅಂದಿನ ಜಿಲ್ಲಾಧಿಕಾರಿಯೇ ಹೊಣೆ ಎನ್ನಲಾಗಿದೆ. ‘ಮಹಾತ್ಮ ಗಾಂಧಿಯವರ ಮೂರ್ತಿ ಗ್ಯಾಲರಿಯಲ್ಲಿ ಭಾವಚಿತ್ರ ಚೇರ್ ಟೇಬಲ್ ಧ್ವನಿವರ್ಧಕ ಸೇರಿದಂತೆ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಇರುತ್ತವೆ. ಇದಕ್ಕೆ ₹20 ಲಕ್ಷ ಅನುದಾನ ಅಗತ್ಯವಿದೆ. ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಉದ್ಘಾಟನೆಯಾದ ನಂತರ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ’ ಎನ್ನುತ್ತಾರೆ ಅಧಿಕಾರಿಗಳು.
ಸ್ಥಳ ಆಯ್ಕೆ ಸರಿಯೇ?
‘ಗಾಂಧಿ ಭವನ ನಿರ್ಮಾಣಕ್ಕೆ ಮಂಡ್ಯ ನಗರದಿಂದ 12 ಕಿ.ಮೀ. ದೂರದಲ್ಲಿರುವ ಬಿ.ಹೊಸೂರು ಗ್ರಾಮದ ಬಳಿ ಸ್ಥಳ ಆಯ್ಕೆ ಮಾಡಿದ್ದು ಸರಿಯೇ? ಅಲ್ಲಿ ಕಾರ್ಯಕ್ರಮ ನಡೆಸಿದರೆ ಎಷ್ಟು ಜನ ಹೋಗಿ ಬರಲು ಸಾಧ್ಯ? ವರ್ಷದಲ್ಲಿ ಎರಡೋ ಮೂರೋ ಕಾರ್ಯಕ್ರಮ ನಡೆಸಿದರೆ ಉಳಿದ ಅವಧಿಯಲ್ಲಿ ಈ ಭವ್ಯ ಭವನ ‘ಭೂತ ಬಂಗಲೆ’ಯಂತಾಗುವುದಿಲ್ಲವೇ?’ ಎನ್ನುತ್ತಾರೆ ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್.
‘ಮಂಡ್ಯ ನಗರ ವ್ಯಾಪ್ತಿಯಲ್ಲೇ ಗಾಂಧಿ ಭವನ ನಿರ್ಮಿಸಿದ್ದರೆ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದರಿಂದ ವಾರ್ತಾ ಇಲಾಖೆಗೆ ನಿಯಮಿತ ಆದಾಯ ಕೂಡ ಸಿಗುತ್ತಿತ್ತು. ಸಾಹಿತ್ಯ ಸಂಗೀತ ನಾಟಕ ಕಾರ್ಯಕ್ರಮ ಆಯೋಜಿಸುವವರಿಗೂ ಉತ್ತಮ ಸಭಾಂಗಣ ಸಿಗುತ್ತಿತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಲೋಚನೆಯಿಲ್ಲದೆ ಕೈಗೊಳ್ಳುವ ನಿರ್ಧಾರದಿಂದ ಜನರ ತೆರಿಗೆ ಹಣ ಪೋಲಾಗುತ್ತದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.