ಮಂಡ್ಯ: ಜಿಲ್ಲಾಧಿಕಾರಿ ಕಚೇರಿ ಎದುರು ಆಗಸ್ಟ್ 15ರಂದು ಬೆಳಿಗ್ಗೆ 11.30ಕ್ಕೆ ತೆರೆದ ಬೆಳ್ಳಿರಥದಲ್ಲಿ ಗೌತಮ ಬುದ್ಧ ಪ್ರತಿಮೆ ಮೆರವಣಿಗೆ, ಪುಷ್ಪಾರ್ಚನೆ ಹಾಗೂ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಸ್ಫೂರ್ತಿಧಾಮ ಬಿಕ್ಕು ಧಮ್ಮವೀರ ಬಂತೆ ಹೇಳಿದರು.
‘ಬೋಧಿಸತ್ವ ಡಾ.ಬಿ.ಆರ್. ಅಂಬೇಡ್ಕರ್ ಅವರು ದೀಕ್ಷೆ ಪಡೆದು 2031ರ ವೇಳೆಗೆ 75 ವರ್ಷ ಆಗುತ್ತಿದ್ದು, ಈ ಸಂಭ್ರಮದ ಅಂಗವಾಗಿ ಭಾರತದಲ್ಲಿ ಹಲವು ಮಂದಿ ಮೂಲ ನಿವಾಸಿಗಳು ಬೌದ್ಧ ಧರ್ಮಕ್ಕೆ ಮರಳುತ್ತಿದ್ದಾರೆ. ಇದರ ಅಂಗವಾಗಿ ಕಾರ್ಯಕ್ರಮ ಆಯೋಜಿಸಿದ್ದು, ಗೌತಮ ಬುದ್ಧನ ರಥದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡುವರು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಮೆರವಣಿಗೆ ಹಾಗೂ ಬೈಕ್ ಜಾಥಾವು ಶ್ರೀರಂಗಪಟ್ಟಣ ತಾಲ್ಲೂಕಿನ ನೇರೆಲಕೆರೆಯವರೆಗೆ ಸಾಗಲಿದ್ದು, ಡೊಳ್ಳು ಕುಣಿತ, ತಮಟೆ, ನಗಾರಿ ವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಶಾಸಕ ಪಿ. ರವಿಕುಮಾರ್‌ಗೌಡ ಅಧ್ಯಕ್ಷತೆ ವಹಿಸಲಿದ್ದು, ಕೊಳ್ಳೆಗಾಲದ ಜೇತವನ ಬುದ್ಧ ವಿಹಾರದ ಮನೋರಕ್ಕಿತ ಭಂತೇಜಿ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜನ ಬಾಲದಂಡಿ, ನಿವೃತ್ತ ಎ.ಡಿ.ಜಿ.ಪಿ ಸುಭಾಷ ಭರಣಿ, ಪ್ರೊ.ಕೆ.ಎಸ್. ಭಗವಾನ್, ಡಾ. ಸುರೇಂದ್ರ, ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿದತ್ತ ಥೇರಾ, ಪ್ರೊ.ತುಕಾರಾಮ್, ಮೂಡ್ನಾಕೂಡು ಚಿನ್ನಸ್ವಾಮಿ, ಎಂ.ಸಿ. ಶಿವರಾಜ್, ದರ್ಶನ್ ಸೋಮಶೇಖರ್ ಭಾಗವಹಿಸುವರು ಎಂದು ತಿಳಿಸಿದರು.
ಬುದ್ದ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಮುಖಂಡರಾದ ಸುರೇಶ್ ಕಂಠಿ, ಗಂಗರಾಜು, ಅಮ್ಜ್‌ದ್ ಪಾಷ, ಪ್ರದೀಪ್‌ಗೌಡ, ಬೆಂಜಮಿನ್ ಥಾಮಸ್, ಗುರಪ್ಪ, ಲೋಕೇಶ್ ಇದ್ದರು.
..........
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.