ADVERTISEMENT

ಐತಿಹಾಸಿಕ ಗೆಳತಿ ಮಂಟಪ ನಿರ್ಲಕ್ಷ್ಯ

ಜೂಜುಕೋರರು, ಕುಡುಕರು ಹಾಗೂ ಪುಂಡರ ಅಡ್ಡೆಯಾದ ಸ್ಮಾರಕ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:22 IST
Last Updated 18 ಮೇ 2019, 20:22 IST
ನಾಗಮಂಗಲ ಸಮೀಪದ ಗುಡ್ಡದಲ್ಲಿರುವ ಗೆಳತಿ ಮಂಟಪದ ಸಮೀಪ ಗಿಡ, ಗಂಟಿ ಬೆಳೆದುಕೊಂಡಿರುವುದು
ನಾಗಮಂಗಲ ಸಮೀಪದ ಗುಡ್ಡದಲ್ಲಿರುವ ಗೆಳತಿ ಮಂಟಪದ ಸಮೀಪ ಗಿಡ, ಗಂಟಿ ಬೆಳೆದುಕೊಂಡಿರುವುದು   

ನಾಗಮಂಗಲ: ಪಟ್ಟಣದಿಂದ ಕೆ.ಆರ್.ಪೇಟೆಗೆ ತೆರಳುವ ರಸ್ತೆ ಸಮೀಪದ ಗುಡ್ಡದಲ್ಲಿರುವ ಗೆಳತಿ ಮಂಟಪ ಇಂದು ಸ್ಥಳೀಯರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

ಪಟ್ಟಣದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಗುಡ್ಡದ ಮಂಟಪ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಸ್ಥಳೀಯರಿಗೆ ಇದರ ಪರಿಚಯವೇ ಇಲ್ಲದಂತಾಗಿದೆ. ಅಂದು ಪ್ರಕೃತಿಯ ಸೌಂದರ್ಯ ಸವಿಯಲು ನಿರ್ಮಾಣವಾಗಿದ್ದ ಮಂಟಪ ಇಂದು ಜೂಜುಕೋರರ, ಕುಡುಕರ, ಪುಂಡರ ಮತ್ತು ಮೋಜು ಮಸ್ತಿ ಮಾಡುವವರ ಅಡ್ಡೆಯಾಗಿ ಪರಿಣಮಿಸಿದೆ. ಮೋಜಿಗಾಗಿ ಬಂದ ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಸ್ಮಾರಕದ ಕಂಬಗಳಿಗೆ ಒಡೆದು,ಇಸ್ಪೀಟ್ ಕಾರ್ಡುಗಳು, ಪ್ಲಾಸ್ಟಿಕ್ ಬಾಟಲಿ, ಲೋಟ ಮತ್ತು ಕವರ್‌ಗಳನ್ನು ಬಿಸಾಡಿ ಮಂಟಪವನ್ನು ಹಾಳು ಮಾಡಿದ್ದಾರೆ.

ಸ್ಮಾರಕ ಹಳೆದಾಗಿರುವುದರಿಂದ ಗೋಡೆಗಳು ಕುಸಿದು ಬೀಳುವ ಹಂತ ತಲುಪಿವೆ. ಅಲ್ಲದೆ ಗುಡ್ಡದ ಕಡೆಗೆ ಬರುವ ದಾರಿಯಲ್ಲಿ ಪಟ್ಟಣದ ಕೋಳಿ ಅಂಗಡಿ ಮತ್ತು ಕಲ್ಯಾಣ ಮಂಟಪದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ಇದರಿಂದಾಗಿ ಮಂಟಪದ ದಾರಿಗೆ ಹೋದರೆ ದುರ್ನಾತ ಮೂಗಿಗೆ ಬಡಿಯುತ್ತದೆ.

ADVERTISEMENT

ನಾಗಮಂಗಲದ ಕನ್ನಡ ಸಂಘದ ಗೆಳೆಯರ ಬಳಗ ಆಗಾಗ್ಗೆ ಹುಣ್ಣಿಮೆಯ ರಾತ್ರಿಯಲ್ಲಿ ಈ ಮಂಟಪಕ್ಕೆ ಬರುವ ವಾಡಿಕೆ ಇಟ್ಟುಕೊಂಡಿದ್ದಾರೆ. ಇಂತಹ ಅದ್ಭುತ ಇತಿಹಾಸ ಹೊಂದಿರುವ ಮನೋಹರ ಸ್ಥಳವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಮಂಪಟದ ಐತಿಹಾಸಿಕ ಹಿನ್ನೆಲೆ

15ನೇ ಶತಮಾನದಲ್ಲಿ ನಾಗಮಂಗಲವನ್ನು ಆಳುತ್ತಿದ್ದ ವಿಜಯನಗರದ ಸಾಮಂತನಾಗಿದ್ದ ತಿಮ್ಮಣ್ಣ ದಂಡನಾಯಕ ತನ್ನ ಗೆಳತಿಯ ನೆನಪಿಗಾಗಿ ಕಟ್ಟಿಸಿದ ಸುಂದರ ಮಂಟಪ ಇದು. 20x 20 ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಸುತ್ತಲೂ ಕಲ್ಲುಗಳಿಂದ ಮಾಡಿದ ಜಗತಿ ಮತ್ತು ಒಂಬತ್ತು ಅಂಕಣಗಳನ್ನು ಇದು ಹೊಂದಿದೆ. ಮಂಟಪದಲ್ಲಿ ನಿಂತು ನೋಡಿದರೆ ಪಟ್ಟಣದ ಸಂಪೂರ್ಣ ವಿಹಂಗಮ ನೋಟ ಕಾಣಸಿಗುತ್ತದೆ. ಈ ದೃಶ್ಯ ನೋಡಲು ಈಗಲೂ ರೋಮಾಂಚನವಾಗುತ್ತದೆ.

ಈ ಗುಡ್ಡ ನಾಗಮಂಗಲದವರಿಗೆ ಒಂದು ನೈಸರ್ಗಿಕ ಟೆಲಿಸ್ಕೋಪ್‌ನಂತಿದೆ. ಪಕ್ಕದಲ್ಲೇ ತಿಮ್ಮಣ್ಣ ದಂಡನಾಯಕ ಗೆಳತಿ ವಾಸವಿದ್ದ ಗವಿಯೂ ಇದೆ. ಗವಿಯ ಬಂಡೆಯನ್ನು ಹೊಡೆದು ಕಲ್ಲುಗಣಿಗಾರಿಕೆ ನಡೆಸಲು ಪ್ರಯತ್ನಿಸಲಾಗಿದೆ. ಗವಿಗೆ ಪ್ರವೇಶದ್ವಾರದಲ್ಲಿ ತೆಳು ಇಟ್ಟಿಗೆಗಳಿಂದ ಕಟ್ಟಿದ ಗೋಡೆಯ ಅವಶೇಷಗಳಿವೆ.

ಕೃತಜ್ಞತೆ ಮರೆತ ಜನ

ತಿಮ್ಮಣ್ಣ ದಂಡನಾಯಕ ಅವನ ಗೆಳತಿ ಹೆಸರಿನಲ್ಲಿ ಕಟ್ಟಿಸಿದ ಕೆರೆಯ ನೀರನ್ನೇ ಪಟ್ಟಣದ ಜನ ಇಂದೂ ಕುಡಿಯುತ್ತಿ ದ್ದಾರೆ. ಆದರೆ, ಆ ಮಹಿಳೆಯ ನೆನಪಿಗಾಗಿ ಕಟ್ಟಿದ ಸ್ಮಾರಕವನ್ನು ರಕ್ಷಿಸದೇ ಇರುವುದನ್ನು ನೋಡಿ ದರೆ ನಾವು ಎಷ್ಟು ಕೃತಜ್ಞರು ಎಂಬುದು ತಿಳಿಯುತ್ತದೆ ಎಂದು ಇತಿಹಾಸ ತಜ್ಞ ಕಲೀಂ ಉಲ್ಲಾ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.