ADVERTISEMENT

ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:26 IST
Last Updated 1 ಡಿಸೆಂಬರ್ 2020, 3:26 IST
ಗೋ ಹತ್ಯೆ ನಿಷೇಧ ಮತ್ತು ದೇಸಿ ಗೋವು ತಳಿಗಳ ಸಂರಕ್ಷಣೆಗೆ ಆಗ್ರಹಿಸಿ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು
ಗೋ ಹತ್ಯೆ ನಿಷೇಧ ಮತ್ತು ದೇಸಿ ಗೋವು ತಳಿಗಳ ಸಂರಕ್ಷಣೆಗೆ ಆಗ್ರಹಿಸಿ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ಗೋಹತ್ಯೆ ನಿಷೇಧ ಹಾಗೂ ದೇಸಿ ಗೋವು ತಳಿಗಳ ಸಂರಕ್ಷಣೆಗೆ ಆಗ್ರಹಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಮುಖ್ಯಬೀದಿಯಲ್ಲಿ ಗೋವುಗಳ ಜತೆ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಗೋವುಗಳ ಪರ ಘೋಷಣೆ ಕೂಗಿದರು. ದೇಸಿ ಗೋ ತಳಿಗಳು ಗಮನ ಸೆಳೆದವು. ಮಿನಿ ವಿಧಾನಸೌಧದ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು.

‘ದೇಶದ ಬಹುಸಂಖ್ಯಾತ ಜನರು ದೇವರಂತೆ ಕಾಣುವ ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಇದು ಹಿಂದೂಗಳ ಮನಸ್ಸಿಗೆ ಘಾಸಿಯುಂಟು ಮಾಡುತ್ತಿದೆ. ಗೋಹತ್ಯೆ ನಿಷೇಧಕ್ಕೆ ಹತ್ತಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಸರ್ಕಾರಗಳು ಗಮನ ಹರಿಸುತ್ತಿಲ್ಲ. ದೇಸಿ ಗೋ ತಳಿಗಳ ಪೈಕಿ ಕೆಲವು ಅವಸಾನದ ಅಂಚಿಗೆ ತಲುಪಿವೆ. ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ಜಾಗರಣಾ ವೇದಿಕೆ ತಾಲ್ಲೂಕು ಘಟಕದ ಕಾರ್ಯದರ್ಶಿ ಕೆ. ಚಂದನ್‌ ಆಗ್ರಹಿಸಿದರು.

ADVERTISEMENT

ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಭಟ್‌ ಮಾತನಾಡಿ, ಗೋವುಗಳು ದೈವ ಸ್ವರೂಪಿ ಎಂದು ಭಾವಿಸಿದ್ದೇವೆ. ಕಾಮಧೇನು ಎಂದು ಕರೆಯಲ್ಪಡುವ ಗೋವುಗಳ ಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಟಿ. ಬಾಲರಾಜ್‌, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿದ್ಯಾ ಉಮೇಶ್‌, ರೈತ ಮೋರ್ಚಾ ಅಧ್ಯಕ್ಷ ಜೋಗಿಗೌಡ ಮಾತನಾಡಿದರು.

ಉಪಾಧ್ಯಕ್ಷ ಪೀಹಳ್ಳಿ ರಮೇಶ್‌, ಎ.ಎಂ. ಜಗದೀಶ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಪ್ಪ, ಯುವ ಘಟಕದ ಅದ್ಯಕ್ಷ ಸುನಿಲ್‌, ವಕೀಲ ಎ.ಟಿ. ಜಯಕುಮಾರ್‌, ಉಮೇಶ್‌ಕುಮಾರ್‌. ಬಿ.ಸಿ. ಸಂತೋಷ್‌ಕುಮಾರ್‌, ಎಂ. ಗಿರೀಶ್‌, ಬಿ. ಶಂಕರಬಾಬು, ಅರಕೆರೆ ಪ್ರಶಾಂತ್‌, ಮಂಜುನಾಥ್‌ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.