ADVERTISEMENT

ಮಳವಳ್ಳಿ | ಗರ್ಭಕೋಶದಲ್ಲಿದ್ದ 6 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:15 IST
Last Updated 20 ಫೆಬ್ರುವರಿ 2024, 15:15 IST

ಮಳವಳ್ಳಿ: ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 6 ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದ 40 ವರ್ಷದ ಜ್ಯೋತಿ ಆರು ತಿಂಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಗ್ರಾಮದ ಸ್ಥಳೀಯ ಸರ್ಕಾರಿ ವೈದ್ಯರ ಸಲಹೆ ಮೇರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ನೇತೃತ್ವದಲ್ಲಿ ಮಹಿಳೆಯ ಹೊಟ್ಟೆಯಲ್ಲಿನ ಗೆಡ್ಡೆಯ ಪರೀಕ್ಷೆ ನಡೆಸಿ ಶಸ್ತ್ರಚಿಕಿತ್ಸೆ ನಿರ್ಧರಿಸಿದರು. ಮಂಗಳವಾರ ಮಧ್ಯಾಹ್ನ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ತಜ್ಞ ಡಾ.ಮುರಳೀಧರ್, ಪ್ರಸೂತಿ ತಜ್ಞೆ ಡಾ.ರೇಣುಕಾ ದೇವಿ, ಡಾ.ಜ್ಯೋತಿ, ಅರವಳಿಕೆ ತಜ್ಞ ಡಾ.ಪ್ರಶಾಂತ್, ಡಾ.ಶಿಲ್ಪಾ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ 6 ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ. ದಾದಿಯರಾದ ವಿದ್ಯಾ, ಸುಂದ್ರರಮ್ಮ ಇದ್ದರು.

ADVERTISEMENT

ಇತ್ತೀಚಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಂತ್ರಜ್ಞಾನವುಳ್ಳ ನೂತನ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಉದ್ಘಾಟಿಸಿದ್ದರು. ಇದೇ ಮೊದಲ ಬಾರಿಗೆ ಇಥೊಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

‘ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಗರ್ಭಕೋಶದಲ್ಲಿ ದೊಡ್ಡದಾದ ಗಡ್ಡೆ ಕಂಡುಬಂದಿತ್ತು. ಆಕೆಯ ಮೂತ್ರಕೋಶದ ಮೇಲೆ ಭಾರೀ ಒತ್ತಡ ಹೇರುತ್ತಿದ್ದುದರಿಂದ ಉದರ ಸಂಬಂಧಿ ನೋವು ತಂದು ಮೂತ್ರ ವಿಸರ್ಜನೆಗೂ ತೊಂದರೆ ಆಗುವ ಸಾಧ್ಯತೆಯಿತ್ತು. ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆ ಹೊರತೆಗೆದಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.