ಮಳವಳ್ಳಿ: ತಾಲ್ಲೂಕಿನ ಕೆಂಬೂತಗೆರೆ ಗ್ರಾಮದ ಸರ್ವೆ ನಂ.106ರಿಂದ 192ರವರೆಗೆ ಒತ್ತುವರಿಯಾಗಿದ್ದ ಸರ್ಕಾರಿ ಹಳ್ಳವನ್ನು ಗುರುವಾರ ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು.
ಗ್ರಾಮದ ಸರ್ವೆ ನಂ.156ರಿಂದ ಕೆರೆಯ ಕೋಡಿ ಹಳ್ಳವು ಸರ್ವೆ ನಂ.185ರಿಂದ 162ರವರೆಗೆ ಹಾಗೂ 105ರಿಂದ 107ರವರೆಗೆ ಹಾದು ಹೋಗಿತ್ತು. ಈ ಮಧ್ಯೆ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಹೀಗಾಗಿ ತೆರವುಗೊಳಿಸಿ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ಎಸ್.ವಿ.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದ್ದರು.
ರಾಜಸ್ವ ನೀರಿಕ್ಷಕ ಎಂ.ಪಿ.ರವಿಕುಮಾರ್ ಹಾಗೂ ತಾಲ್ಲೂಕು ಸರ್ವೆಯರ್ ಎಂ.ಎಸ್.ಬೀರೇಶ್ ನೇತೃತ್ವದಲ್ಲಿ ಗುರುವಾರ ಸರ್ವೆ ಕಾರ್ಯ ಮಾಡಿದ ಅಧಿಕಾರಿಗಳು ಒತ್ತುವರಿಯಾಗಿದ್ದ ಹಳ್ಳವನ್ನು ತೆರವುಗೊಳಿಸಿದರು.
ರಾಜಸ್ವ ನೀರಿಕ್ಷಕ ಎಂ.ಪಿ.ರವಿಕುಮಾರ್ ಮಾತನಾಡಿ, ಗ್ರಾಮಸ್ಥರ ದೂರಿನ ಮೇರೆಗೆ ಸರ್ವೆ ಅಧಿಕಾರಿಗಳೊಂದಿಗೆ ಭೇಟಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದವು. ತಹಶೀಲ್ದಾರ್ ಅವರ ಆದೇಶದಂತೆ ಒತ್ತುವರಿಯಾಗಿದ್ದ ಸುಮಾರು 1 ಎಕರೆಯಷ್ಟು ಸರ್ಕಾರಿ ಹಳ್ಳವನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಹತ್ತಾರು ವರ್ಷಗಳಿಂದ ಒತ್ತುವರಿಯಾಗಿದ್ದ ಸರ್ಕಾರಿ ಹಳ್ಳದ ತೆರವಿನಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.
ಗ್ರಾಮಾಂತರ ಪೊಲೀಸ್ ಎಎಸ್ಐ ಸಿದ್ದರಾಜು, ಗ್ರಾಮದ ಮುಖಂಡರಾದ ಜಯರಾಮು, ಸಿಂಪ್ರೇಗೌಡ, ನಾಗೇಗೌಡ, ಎಚ್.ಸಿ.ಚಿಕ್ಕಣ್ಣಗೌಡ, ಮನುಕುಮಾರ್, ನಾಗರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.