
ಮಂಡ್ಯ: ನಾಗಮಂಗಲ ತಾಲ್ಲೂಕು ಕಚೇರಿಯ ರೆಕಾರ್ಡ್ ಸೆಕ್ಷನ್ ದಾಖಲೆಗಳನ್ನು ಅಕ್ರಮವಾಗಿ ತಿದ್ದಿ ಮತ್ತು ಸೃಷ್ಟಿಸಿ, ಸರ್ಕಾರಿ ಜಮೀನು ಕಬಳಿಸಿರುವ ಪ್ರಕರಣವನ್ನು ಭೇದಿಸಲು ನಾಗಮಂಗಲ ಡಿವೈಎಸ್ಪಿ ಚಲುವರಾಜು ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್, ನಾಗಮಂಗಲ ಗ್ರಾಮೀಣ ಠಾಣೆ ಮತ್ತು ಬೆಳ್ಳೂರು ಠಾಣೆಯ ಸಬ್ ಇನ್‌ಸ್ಪೆಕ್ಟರ್‌ಗಳು ತನಿಖಾ ತಂಡದಲ್ಲಿ ಇದ್ದಾರೆ.
ಅಗತ್ಯ ಕಂಡುಬಂದರೆ ತಹಶೀಲ್ದಾರ್, ಶಿರಸ್ತೇದಾರರನ್ನು ವಿಚಾರಣೆಗೆ ಒಳಪಡಿಸಲು ಅನುಕೂಲವಾಗಲಿ ಎಂಬ ಕಾರಣದಿಂದ ತನಿಖೆಯ ಹೊಣೆಯನ್ನು ಡಿವೈಎಸ್ಪಿಗೆ ವಹಿಸಲಾಗಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಇಬ್ಬರು ಶಿರಸ್ತೇದಾರರು, ನಾಲ್ವರು ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರನ್ನು ಬುಧವಾರ ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಲೆಮರೆಸಿಕೊಂಡ ಆರೋಪಿಗಳು:
ಪ್ರಕರಣದಲ್ಲಿ ಆರೋಪಿಗಳಾಗಿರುವ ದ್ವಿತೀಯ ದರ್ಜೆ ಸಹಾಯಕರಾದ ಯೋಗೇಶ್, ವಿಜಯ್‌ಕುಮಾರ್, ಪತ್ರ ಬರಹಗಾರ ಚಿನ್ನಸ್ವಾಮಿ, ಯಶವಂತ್, ಮೊಹಮ್ಮದ್ ವಸೀಂ ಉಲ್ಲಾ ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
‘ಸುಮಾರು 320 ಎಕರೆ ಸರ್ಕಾರಿ ಜಮೀನು ಕಬಳಿಸಿರುವ ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ಪಡೆದಿರುವ ಫಲಾನುಭವಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣದಲ್ಲಿ 2020ರಿಂದ 2025ರ ಅವಧಿಯಲ್ಲಿ ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿರುವ ತಹಶೀಲ್ದಾರ್‌ಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲೋಕಾಯುಕ್ತದಲ್ಲಿ ‘ಸುಮೋಟೊ’:
ಉಪಲೋಕಾಯುಕ್ತ ಬಿ.ವೀರಪ್ಪ ಅವರು ಈಗಾಗಲೇ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಕೂಡ ತನಿಖೆಯ ಮೇಲೆ ನಿರಂತರ ನಿಗಾ ವಹಿಸಲಿದ್ದಾರೆ. ತನಿಖೆಯ ಹೊಣೆ ಲೋಕಾಯುಕ್ತದಿಂದ ಪೊಲೀಸ್ ಇಲಾಖೆಗೆ ಹಸ್ತಾಂತರವಾಗಿದ್ದರಿಂದಲೇ ಶಿರಸ್ತೇದಾರ್‌ಗಳು ಸೇರಿದಂತೆ ಐವರು ಸರ್ಕಾರಿ ನೌಕರರನ್ನು ಕೂಡಲೇ ಜೈಲಿಗೆ ಕಳುಹಿಸಲು ಸಾಧ್ಯವಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ದಲ್ಲಾಳಿಗಳ ಮುಖಾಂತರ ಹಣ ಕೊಟ್ಟವರಿಗೆ ಭೂಮಿ ಮಂಜೂರು ಮಾಡಲಾಗಿದೆ. 2018ರಿಂದಲೂ ಈ ಬಗ್ಗೆ ಹೋರಾಡಿದ್ದೇನೆ. ಈ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಲಿಎನ್.ಜೆ.ರಾಜೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಮಂಗಲ
ಅಧಿಕಾರಿಗಳ ಶಾಮೀಲಿನಿಂದ ಈ ಭ್ರಷ್ಟಾಚಾರ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದೇ ನ್ಯಾಯ. ತಪ್ಪು ಮಾಡಿದವರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕುಆರ್.ಕೃಷ್ಣೇಗೌಡ ಬಗರ್ ಹುಕುಂ ಸಮಿತಿ ಸದಸ್ಯ ನಾಗಮಂಗಲ
ನನ್ನ ಹಸ್ತಕ್ಷೇಪ ಇರುವುದಿಲ್ಲ: ಸಚಿವ
‘ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯವೈಖರಿ ಕುರಿತು ತನಿಖೆ ನಡೆಸಲು ತಂಡ ಕಳುಹಿಸಿ ಎಂದು ಹತ್ತು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೆ. ಡಿಸಿ ಅವರು ಪ್ಲ್ಯಾನ್ ಮಾಡುವುದರೊಳಗೆ ಲೋಕಾಯುಕ್ತದಿಂದ ದಾಳಿ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ. ತನಿಖೆ ವೇಳೆ ಶೇ 100ರಷ್ಟು ನನ್ನ ಹಸ್ತಕ್ಷೇಪ ಇರುವುದಿಲ್ಲ. ಮುಕ್ತ ತನಿಖೆ ನಡೆಯಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ‘ಇಲ್ಲಿ ಕೆಲವು ಗುಂಪುಗಳು ದಾಖಲೆಗಳನ್ನು ಸೃಷ್ಟಿಸುವಲ್ಲಿ ನಿರತವಾಗಿವೆ. ಕಚೇರಿಯ ಹೊರಗಿನವರು ಶಾಮೀಲಾಗಿರುವ ಶಂಕೆಯಿದೆ. ಯಾವ ಹಂತದವರೆಗೆ ಬೇಕಾದರೂ ತನಿಖೆ ಮಾಡಲಿ’ ಎಂದು ಸೂಚಿಸಿದ್ದೇನೆ.
ಪ್ರಭಾವಿಗಳು ಶಾಮೀಲು: ಸುರೇಶ್‌ಗೌಡ
‘ತಪ್ಪಿತಸ್ಥರು ಯಾರು ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿರುತ್ತದೆ. ಆದರೆ ನನಗೆ ಈ ಕಾಂಗ್ರೆಸ್ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ. ಎರಡು ದಿನ ತನಿಖೆ ನಡೆದು ನಂತರ ಮುಚ್ಚಿ ಹೋಗುತ್ತದೆ. ಏಕೆಂದರೆ ಬಹಳ ಪ್ರಭಾವಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಒಂದು ಪಕ್ಷದ ಅಧ್ಯಕ್ಷ ಮತ್ತು ಮುಖಂಡರೇ ಶಾಮೀಲಾಗಿದ್ದಾರೆ’ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದ್ದಾರೆ. ‘ಯಾವ ರೈತ ಹತ್ತಾರು ವರ್ಷ ಉಳುಮೆ ಮಾಡಿದ್ದಾನೋ ಅವನಿಗೆ ಮಾತ್ರ ಭೂಮಿ ಸಿಗಬೇಕು. ಕಂಪ್ಯೂಟರ್‌ನಲ್ಲಿ ಆರ್‌ಟಿಸಿ ತೆಗೆಸಿದರೆ ಎಲ್ಲರ ಬಂಡವಾಳ ಬಯಲಾಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.