ADVERTISEMENT

ಶಿಕ್ಷಣ ಕ್ಷೇತ್ರದಲ್ಲೂ ಮಹಿಳೆಯರೇ ಪ್ರಧಾನ: ಸಚಿವ ಎನ್‌.ಚಲುವರಾಯಸ್ವಾಮಿ

ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:20 IST
Last Updated 13 ಸೆಪ್ಟೆಂಬರ್ 2025, 5:20 IST
ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು 
ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು    

ಮಂಡ್ಯ: ‘ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಜ್ಞಾನ ನೀಡುವ ಮೂಲಕ ಅವರನ್ನು ಉತ್ತಮ ಪ್ರಜೆಯಾಗಿ ಮಾಡುವ ಕೆಲಸವನ್ನು ಶಿಕ್ಷಕರು ಮಾಡುತ್ತಿರುವುದು ಮೆಚ್ಚುವ ವಿಷಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಶ್ಲಾಘಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಮಹಿಳೆಯರೇ ಪ್ರಧಾನವಾಗಿದ್ದಾರೆ. ಕೇವಲ ಶಿಕ್ಷಕರಿಗಷ್ಟೇ ಮಕ್ಕಳ ಮೇಲೆ ಜವಾಬ್ದಾರಿ ಇರುವುದಿಲ್ಲ ಎನ್ನುವುದು ಪೋಷಕರಾದವರು ಅರಿತುಕೊಳ್ಳಬೇಕು. ಮನೆಯೇ ಮೊದಲ ಪಾಠ ಶಾಲೆಯಾಗಿದೆ’ ಎಂದರು.

ADVERTISEMENT

‘ವಿದ್ಯಾರ್ಥಿ ದಿಸೆಯಲ್ಲಿಯೇ ನಾಡಿಗೆ ನೀಡುವ ಸೇವೆಯ ಬಗ್ಗೆ ತಿಳಿಸಿಕೊಡಬೇಕು. ಜೊತೆಗೆ ಇತಿಹಾಸ ಮತ್ತು ಮಹನೀಯರ ಬಗ್ಗೆ ಮನದಟ್ಟು ಮಾಡಿಕೊಡಬೇಕು. ದೇಶದ ಅಭಿವೃದ್ಧಿ ತಿಳಿಸುವುದು ಮತ್ತು ಸಮಸ್ಯೆಗಳು ಬಂದರೆ ಯಾವ ರೀತಿ ಎದುರಿಸಬೇಕೆನ್ನುವುದರ ಕುರಿತು ಜ್ಞಾನವನ್ನು ತಿಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಕರಿಗೆ ಉತ್ತಮ ಪ್ರಶಸ್ತಿ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್‌, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್‌, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್‌. ನಂದಿನಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ನಾಗೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಜೆ.ವೈ. ಮಂಜುನಾಥ್‌ ಭಾಗವಹಿಸಿದ್ದರು.

ಮನೆಯೇ ಮೊದಲ ಪಾಠಶಾಲೆ  ಇತಿಹಾಸ ಮತ್ತು ಮಹನೀಯರ ಬಗ್ಗೆ ತಿಳಿಸಿ ಸರ್ವಪಲ್ಲಿ ರಾಧಾಕೃಷ್ಣನ್‌ ಕೊಡುಗೆ ಅಪಾರ 

‘ಸರ್ಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ?’ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪಿ.ರವಿಕುಮಾರ್‌ ‘ಸರ್ಕಾರವು ಶಿಕ್ಷಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ ಎಂಬುದರ ಬಗ್ಗೆ ಏಕೆ ಯೋಚನೆ ಮಾಡುತ್ತಿಲ್ಲ. ಒಂದು ಶಾಲೆ ಮುಚ್ಚಿದರೆ ಒಬ್ಬ ಶಿಕ್ಷಕ ಕುಟುಂಬದ ಅನ್ನ ಕಿತ್ತುಕೊಂಡಂತೆ ಎಂಬುದನ್ನು ತಿಳಿದುಕೊಳ್ಳಬೇಕು. 300ಕ್ಕೂ ಹೆಚ್ಚು ಶಾಲೆಗಳು ಮುಚ್ಚಿವೆ ಎಂದರೆ ಅಷ್ಟೇ ಮಾದರಿಯಲ್ಲಿ ಶಿಕ್ಷಕರ ಕೆಲಸ ಕಿತ್ತುಕೊಂಡಂತೆ ಎನ್ನುವುದನ್ನು ತಿಳಿದುಕೊಳ್ಳಬೇಕು’ ಎಂದರು. ‘ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಗುರುತರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸರ್ಕಾರವು ಗ್ಯಾರಂಟಿ ಮೂಲಕ ಹಲವು ಯೋಜನೆಗಳನ್ನು ತಂದಿದ್ದು ಶಿಕ್ಷಕರಿಗೂ ಅನುಕೂಲವಾಗಿದೆ. ಮತ್ತಷ್ಟು ನಿಮಗೆ ಸಹಾಯ ಮಾಡುವ ಮೂಲಕ ಸರ್ಕಾರ ಜೊತೆಯಲ್ಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.