ADVERTISEMENT

ಡಿಸಿಎಂ ಆಗಲು ನಾರಾಯಣಗೌಡ ಕಾರಣ

ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶದಲ್ಲಿ ಗೋವಿಂದ ಕಾರಜೋಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:58 IST
Last Updated 1 ಡಿಸೆಂಬರ್ 2019, 13:58 IST
ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಗೋವಿಂದ ಕಾರಜೋಳ ಉದ್ಘಾಟಿಸಿದರು
ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಗೋವಿಂದ ಕಾರಜೋಳ ಉದ್ಘಾಟಿಸಿದರು   

ಕೆ.ಆರ್.ಪೇಟೆ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರವು ರಚನೆಯಾಗಲು ನಾರಾಯಣ ಗೌಡ ತ್ಯಾಗ ದೊಡ್ಡದು. ಅವರ ತ್ಯಾಗದ ಫಲವಾಗಿ ದಲಿತ ವರ್ಗಕ್ಕೆ ಸೇರಿದ ನಾನು ಉಪಮುಖ್ಯಮಂತ್ರಿ ಆಗಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶದಲ್ಲಿ ಅವರು ಮಾತನಾಡಿದರು.‌

ಈ ಮಣ್ಣಿನ ಮಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಅದಕ್ಕೆ ನಾರಾಯಣಗೌಡ ಕಾರಣ. ಯಡಿಯೂರಪ್ಪ ಅವರ ಕೈಬಲಪಡಿಸಿ ಬಿಜೆಪಿ ಸರ್ಕಾರಕ್ಕೆ ಶಕ್ತಿ ತುಂಬಲು ನಾರಾಯಣಗೌಡ ಅವರನ್ನು ಗೆಲ್ಲಿಸಿ ಕೊಡಬೇಕು. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಕಳೆದ 60 ವರ್ಷಗಳಿಂದಲೂ ದಲಿತರನ್ನು ಮತ ಬ್ಯಾಂಕನ್ನಾಗಿ ಮಾಡಿಕೊಂಡು ಶೋಷಣೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿ, ದಲಿತರು ಮತ್ತು ಶೋಷಿತರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಹೀಗಾಗಿ, ಬಿಜೆಪಿಯನ್ನು ದಲಿತರು ಬೆಂಬಲಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸಂಸದ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಶಾಸಕ ಮೂಡಿಗೆರೆ ಕುಮಾರಸ್ವಾಮಿ, ತೇಜಸ್ವಿನಿಗೌಡ, ಇ.ಅಶ್ವತ್ಥನಾರಾಯಣ, ಕೆ.ಶಿವರಾಂ, ಕೆಂಪಬೋರಯ್ಯ, ನಿತ್ಯಾನಂದ, ಚಿಕ್ಕಣ್ಣ, ಕೃಷ್ಣಮೂರ್ತಿ ಇದ್ದರು.

‘ಎಚ್‌.ಡಿ.ಕುಮಾರಸ್ವಾಮಿ ಅಳುವ ಸಂಸ್ಕೃತಿ ಬಿಡಲಿ’

ಮದ್ದೂರು: ಎಚ್‌.ಡಿ.ಕುಮಾರಸ್ವಾಮಿ ಅವರು ಚಿಕ್ಕ ವಯಸ್ಸಿನಲ್ಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರು ಅದೇ ಸಂತೋಷದಲ್ಲಿ ಕಾಲ ಕಳೆಯಬೇಕು. ಕಣ್ಣೀರು ಸುರಿಸುವ ಸಂಸ್ಕೃತಿ ಬಿಡಬೇಕು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ನೀಡಿದರು.

ಕೆ.ಆರ್.ಪೇಟೆಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಅವರು, ಸೋಮನಹಳ್ಳಿಯ ಬಳಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ದೇವೇಗೌಡರು ಗೊಂದಲದ ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗಳು ಸತ್ಯಕ್ಕೆ ದೂರ. ಉಪ ಚುನಾವಣಾ ಬಳಿಕ ರಾಜಕೀಯ ಧ್ರುವೀಕರಣವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅಧಿಕಾರ ಇಲ್ಲದೆ ಖಾಲಿ ಕೈಯಲ್ಲಿ ಕುಳಿತ್ತಿದ್ದಾರೆ. ಅವರಿಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು ಬೇರೆ ಏನೂ ಕೆಲಸ ಇಲ್ಲ ಎಂದು ವ್ಯಂಗ್ಯವಾಡಿದರು.

ಅಡಗೂರು ಎಚ್‌.ವಿಶ್ವನಾಥ್ ಅವರೇ ಯಡಿಯೂರಪ್ಪ ಅವರ ಬಟ್ಟೆ ಹರಿಯುತ್ತಾರೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆ ಉತ್ತರಿಸಿದ ಅವರು, ‘ಯಾರಿಗೆ ಯಾವ ಕನಸು ಬೀಳುತ್ತದೋ ನನಗೆ ಗೊತ್ತಿಲ್ಲ. ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.