ADVERTISEMENT

ಗ್ರಾಮವಾಸ್ತವ್ಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ: ಎಚ್‌.ಡಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 12:18 IST
Last Updated 18 ಜೂನ್ 2019, 12:18 IST
ಆತ್ಮಹತ್ಯೆ ಮಾಡಿಕೊಂಡ ಕೆ.ಆರ್.ಪೇಟೆ ತಾಲ್ಲೂಕು ಅಘಲಯ ಗ್ರಾಮದ ರೈತ ಎ.ಎನ್‌.ಸುರೇಶ್‌ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ₹ 5 ಲಕ್ಷದ ಪರಿಹಾರ ಚೆಕ್‌ ವಿತರಣೆ ಮಾಡಿದರು
ಆತ್ಮಹತ್ಯೆ ಮಾಡಿಕೊಂಡ ಕೆ.ಆರ್.ಪೇಟೆ ತಾಲ್ಲೂಕು ಅಘಲಯ ಗ್ರಾಮದ ರೈತ ಎ.ಎನ್‌.ಸುರೇಶ್‌ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ₹ 5 ಲಕ್ಷದ ಪರಿಹಾರ ಚೆಕ್‌ ವಿತರಣೆ ಮಾಡಿದರು   

ಮಂಡ್ಯ: ‘ಮಹಾರಾಷ್ಟ್ರ ರಾಜ್ಯ, ಮರಾಠವಾಡ ಭಾಗದ ರೈತರು ಸರ್ಕಾರದ ನೆರವಿಲ್ಲದೇ ಕೃಷಿಯಲ್ಲಿ ಮಾಡಿರುವ ಸಾಧನೆಗಳನ್ನು ವಾರ್ತಾ ಇಲಾಖೆಯಿಂದ ಚಿತ್ರೀಕರಿಣ ಮಾಡಿಸಿದ್ದೇನೆ. ಮುಂದಿನವಾರ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯದ ವೇಳೆ ಹಳ್ಳಿಗಳಲ್ಲಿ ಅದನ್ನು ಸಾಕ್ಷ್ಯಚಿತ್ರವನ್ನಾಗಿ ಪ್ರದರ್ಶನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕೆ.ಆರ್‌.ಪೇಟೆ ತಾಲ್ಲೂಕು, ಅಘಲಯ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಎ.ಎನ್‌.ಸುರೇಶ್‌ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು.

‘ಮಹಾರಾಷ್ಟ್ರದ ಗ್ರಾಮ ಪಂಚಾಯಿತಿಯೊಂದರಲ್ಲಿ ಮಳೆ ನೀರು ಸಂಗ್ರಹಿಸಿ, ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಈಗ ಪ್ರತಿ ವರ್ಷ ₹ 50– 70 ಕೋಟಿ ಆದಾಯ ತೆಗೆಯುತ್ತಿದ್ದಾರೆ. ಗುಳೇ ಹೋಗಿದ್ದ ರೈತರೆಲ್ಲರೂ ಗ್ರಾಮಕ್ಕೆ ವಾಪಸ್‌ ಬಂದು ಕೃಷಿ ಮಾಡುತ್ತಿದ್ದಾರೆ. ಆ ರೈತರ ಸಂದರ್ಶನ ಸೇರಿದ ವಿವರಗಳ ಸಾಕ್ಷ್ಯಚಿತ್ರ ತಯಾರಾಗಿದ್ದು ಗ್ರಾಮ ವಾಸ್ತವ್ಯದ ವೇಳೆ ರೈತರ ಮುಂದೆ ಇಡುತ್ತೇನೆ’ ಎಂದರು.

ADVERTISEMENT

‘ಹಳ್ಳಿಗಳು ಉದ್ಧಾರವಾಗದಿರಲು ನಾನು ಕಾರಣವಲ್ಲ, ಎಚ್‌.ಡಿ.ದೇವೇಗೌಡರ ಕುಟುಂಬ ಕಾರಣವಲ್ಲ. 60 ವರ್ಷಗಳಿಂದ ನಾವು ಅಧಿಕಾರ ನಡೆಸಿಲ್ಲ. ಆದರೆ ಈಗ ಗ್ರಾಮಗಳಿಗೆ ಸೌಲಭ್ಯ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಅಧಿಕಾರಿಗಳನ್ನು ರೈತರ ಬಳಿಗೆ ಕರೆದೊಯ್ದು ಆತ್ಮಹತ್ಯೆ ಮಾಡಿಕೊಳ್ಳದಂತೆ ಅವರಿಗೆ ಧೈರ್ಯ ತುಂಬಿಸುವ ಉದ್ದೇಶದಿಂದಲೇ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ’ ಎಂದರು.

ಬಿಜೆಪಿ ವಿರುದ್ಧ ಆಕ್ರೋಶ:
‘ಗ್ರಾಮ ವಾಸ್ತವ್ಯವನ್ನು ಬಿಜೆಪಿ ಮುಖಂಡರು ಗಿಮಿಕ್‌ ಎಂದು ಹೇಳುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು, ಗ್ರಾಮ ವಾಸ್ತವ್ಯ ಬಿಟ್ಟು ಬರ ವೀಕ್ಷಣೆ ಮಾಡಿ ಎಂದು ಸಲಹೆ ನೀಡಿದ್ದಾರೆ. ನಾನು ಗ್ರಾಮ ವಾಸ್ತವ್ಯ ಮಾಡಲು ಉದ್ದೇಶಿಸಿರುವ ಯಾದಗಿರಿ ಜಿಲ್ಲೆಗೆ ತೆರಳಿ ಅವರು ಪರಿಶೀಲನೆ ಮಾಡಿದ್ದಾರೆ. ಅಲ್ಲಿಯ ಅಭಿವೃದ್ಧಿ ಕೆಲಸ ನೋಡಿ ಅಧಿಕಾರಿಗಳನ್ನು ಮೆಚ್ಚಿಕೊಂಡ ಅವರು ರಾಜಕಾರಣಕ್ಕಾಗಿ ಸರ್ಕಾರವನ್ನು ಟೀಕೆ ಮಾಡುತ್ತೇನೆ, ತಪ್ಪು ತಿಳಿಯಬೇಡಿ ಎಂದು ಐಬಿಯಲ್ಲಿ ತಿಳಿಸಿದ್ದಾರೆ. ಅದರ ಎಲ್ಲಾ ಮಾಹಿತಿ ಪಡೆದಿದ್ದೇನೆ’ ಎಂದರು.

ಕೆರಳಾ ಮಾದರಿ ಕಾನೂನು:
‘ಖಾಸಗಿ ಸಾಲದಿಂದ ಬಡವರನ್ನು ರಕ್ಷಣೆ ಮಾಡಲು ಕೇರಳಾ ಮಾದರಿಯಲ್ಲಿ ಕಾನೂನು ರೂಪಿಸಲು ಉದ್ದೇಶಿಸಲಾಗಿದೆ. ಅಧಿಕಾರಿಗಳನ್ನು ಕಳುಹಿಸಿ ಆ ಕಾನೂನಿನ ವ್ಯಾಪ್ತಿಯನ್ನು ಅಧ್ಯಯನ ಮಾಡಿಸಿದ್ದೇನೆ. ಮುಂದಿನ ವಿಧಾನಸಭಾ ಅಧಿವೇಶನದ ವೇಳೆ ಆ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದರು.

‘ಇಡೀ ದೇಶದಲ್ಲಿ ಕರ್ನಾಟಕದ ಜನರು ಮಾತ್ರ ನಮ್ಮ ನೀರನ್ನು ನಾವೇ ಬಳಸಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಜಲಾಶಯಗಳ ನೀರು ಬಳಸಲು ಕೋರ್ಟ್‌, ನ್ಯಾಯಾಧೀಕರಣಗಳ ಆದೇಶ ಪಾಲನೆ ಮಾಡಬೇಕಾಗಿದೆ. ಕಾವೇರಿ ನೀರು ಪಡೆಯುವುದಕ್ಕಾಗಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಬೇಕಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆ, ಮಹದಾಯಿ ನೀರು ಬಳಕೆ ವಿಷಯದಲ್ಲೂ ಇದೇ ಪರಿಸ್ಥಿತಿ ಇದೆ’ ಎಂದರು.

**

ರೈತನ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ

ಶವ ಸಂಸ್ಕಾರಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಘಲಯ ಗ್ರಾಮದ ರೈತ ಎ.ಎನ್‌.ಸುರೇಶ್‌ ಕುಟುಂಬ ಸದಸ್ಯರಿಗೆ ಎಚ್‌.ಡಿ.ಕುಮಾರಸ್ವಾಮಿ ₹ 5 ಲಕ್ಷ ಪರಿಹಾರ ವಿತರಣೆ ಮಾಡಿದರು.

‘ಕೆರೆ ತುಂಬಿಸುವಂತೆ ಮನವಿ ಮಾಡಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬಹಳ ಅವಸರ ಮಾಡಿಬಿಟ್ಟರು ಎನಿಸುತ್ತಿದೆ. ಸಂತೇಬಾಚಹಳ್ಳಿ ಹೋಬಳಿ ಸೇರಿ ನಾಗಮಂಗಲ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ನಾಗಮಂಗಲ ತಾಲ್ಲೂಕಿನ ಕೆರೆ ತುಂಬಿಸಲು ಈಗಾಗಲೇ ₹ 213 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಶೀಘ್ರ ಆ ಯೋಜನೆ ಕಾರ್ಯರೂಪಕ್ಕೆ ಬರಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.