ADVERTISEMENT

₹ 300 ಕೋಟಿ ಅನುದಾನಕ್ಕೆ ತಡೆ: ಅನ್ನದಾನಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 14:15 IST
Last Updated 7 ಜನವರಿ 2020, 14:15 IST

ಮಂಡ್ಯ: ‘ಸಮ್ಮಿಶ್ರ ಸರ್ಕಾರ ಬದಲಾದ ನಂತರ ಮಳವಳ್ಳಿ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಇಲಾಖೆಗಳ ಸುಮಾರು ₹300ಕೋಟಿ ಅನುದಾನ ತಡೆ ಹಿಡಿಯಲಾಗಿದ್ದು ಅಭಿವೃದ್ಧಿಗೆ ಹಿನ್ನೆಡೆಯಾಗಿದೆ’ ಎಂದು ಶಾಸಕ ಕೆ.ಅನ್ನದಾನಿ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂದಿನ ಸರ್ಕಾರ ಮಳವಳ್ಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹1,300ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಗ್ರಾಮೀಣಾಭಿವೃದ್ಧಿ ₹10ಕೋಟಿ, ಭಾರಿ ನೀರಾವರಿ ಇಲಾಖೆಯ ₹25 ಕೋಟಿ ಕಾಮಗಾರಿಯ ಡಿಪಿಆರ್‌ ತಯಾರಾಗಿದ್ದು, ಟೆಂಡರ್‌ಗೆ ತಡೆ ನೀಡಲಾಗಿದೆ. ಹನಿ ನೀರಾವರಿ ಇಲಾಖೆಯ ₹200 ಕೋಟಿ ಕಾಮಗಾರಿ ಡಿಪಿಆರ್‌ ಆಗ‌ದೆ ಮಂದಗತಿಯಲ್ಲಿ ಸಾಗುತ್ತಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಪ್ರದರ್ಶಿಸುತ್ತಿದೆ. ಕೂಡಲೇ ಡಿಪಿಆರ್‌ ಪೂರ್ಣಗೊಳಿಸಿ ಟೆಂಡರ್‌ ಕರೆಯುವಂತೆ ಮಾಡಬೇಕು. ರಸ್ತೆ, ಕುಡಿಯುವ ನೀರು, ಗ್ರಾಮೀಣ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದೆ ಕೆಲಸಗಳು ಕುಂಠಿತವಾಗಿದೆ’ ಎಂದು ದೂರಿದರು.

‘ಕಾಂಗ್ರೆಸ್‌ ಸರ್ಕಾರದ ಯಾವುದೇ ಕಾಮಗಾರಿಗಳಿಗೆ ತಡೆ ನೀಡಿಲ್ಲ. ಆಧಾರವಿಲ್ಲದೆ ಕಾಮಗಾರಿ ತಡೆ ಹಿಡಿಯಲಾಗಿದೆ ಎಂದು ಪ್ರಚಾರಕ್ಕಾಗಿ ಆರೋಪಿಸುತ್ತಿದ್ದಾರೆ. ದಾಖಲೆ ಇದ್ದರೆ ನೀಡಿ ಮಾತನಾಡಲಿ, ಇಲ್ಲದಿದ್ದರೆ ಆಡಿರುವ ಮಾತನ್ನು ವಾಪಸ್ಸು ಪಡೆಯಲಿ. 120 ವರ್ಷ ಇತಿಹಾಸವಿರುವ ಪಕ್ಷದವರು ಆಧಾರವಿಲ್ಲದೆ ಮಾತನಾಡಬಾರದು’ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ADVERTISEMENT

‘ಶಾಸಕರ ನಿಧಿ ಬಳಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು 2018–19ಸಾಲಿನ ₹50ಲಕ್ಷ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ. 2019–20 ಅನುದಾನದಲ್ಲಿ ಒಕ್ಕಲಿಗರ ಭವನ, ಕನಕ ಭವನಕ್ಕೆ ತಲಾ ₹18ಲಕ್ಷ, ಶ್ರೀರಾಮ ವಾಲ್ಮೀಕಿ ಭವನಕ್ಕೆ ₹10ಲಕ್ಷ ಡಿಪಿಆರ್‌ ತಯಾರಾಗಿದ್ದು, ಹಣ ಬಿಡುಗಡೆಗೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

‘2009ರಲ್ಲಿ ಮಳವಳ್ಳಿ ಟೌನ್‌ ಹೌಸಿಂಗ್‌ ಬೋರ್ಡ್‌ನಲ್ಲಿ ನಿವೇಶನಕ್ಕಾಗಿ 2430ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೆ ಯಾರಿಗೂ ನಿವೇಶನ ನೀಡಿಲ್ಲ. ಅರ್ಜಿ ಹಾಕಿಸಿಕೊಂಡು ಆಸೆ ಹುಟ್ಟಿಸಿ, ವಂಚನೆ ಮಾಡುತ್ತಿದ್ದಾರೆ. ಇದು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವಾಗಿದೆ’ ಎಂದರು.

ಜೆಡಿಎಸ್‌ ಎಸ್‌ಸಿ ಘಟಕದ ಅಧ್ಯಕ್ಷ ಜಯರಾಮ್‌, ಯುವ ಘಟಕದ ಅಧ್ಯಕ್ಷ ಚಂದಹಳ್ಳಿ ಶ್ರೀಧರ್‌, ಹಿಂದುಳಿದ ವರ್ಗಗಳ ಘಟಕದ ಸಿದ್ದಾಚಾರಿ, ಪುರಸಭೆ ಸದಸ್ಯ ವಡ್ಡರಹಳ್ಳಿ ಸಿದ್ದರಾಜು, ಗುರುಸ್ವಾಮಿ ಇದ್ದರು.

18, 19ರಂದು ಗಗನಚುಕ್ಕಿ ಜಲಪಾತೋತ್ಸವ

ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಜ.18 ಹಾಗೂ 19ರಂದು ಜಲಪಾತೋತ್ಸವ ನಡೆಯಲಿದೆ’ಎಂದು ಅನ್ನದಾನಿ ಹೇಳಿದರು.

‘ಕಾರಣಾಂತರಗಳಿಂದ ಕಳೆದೆರಡು ವರ್ಷಗಳಿಂದ ಜಲಪಾತೋತ್ಸವ ಮಾಡಲು ಸಾಧ್ಯವಾಗಿಲ್ಲ. ಈಗ ನಿಗದಿಯಾಗಿರುವ ದಿನಾಂಕದಲ್ಲೇ ಜಲಾಪಾತೋತ್ಸವ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.