ಮದ್ದೂರು: ತಾಲ್ಲೂಕಿನ ಗೆಜ್ಜಲಗೆರೆ ಕಾಲೊನಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸ್ಮಶಾನದ ಜಾಗವನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಫಿಸಿ ಬುಧವಾರ ಗ್ರಾಮದಿಂದ ಪಾದಯಾತ್ರೆ ನಡೆಸಿ ನಂತರ ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಮುಖಂಡರಾದ ಮಂಜುನಾಥ್ ಮಾತನಾಡಿ, ‘ಗೆಜ್ಜಲಗೆರೆ ಕಾಲೊನಿಯ 2.30 ಎಕರೆ ಸರ್ಕಾರಿ ಜಾಗದಲ್ಲಿ ಸುಮಾರು 60ರಿಂದ 70 ವರ್ಷಗಳಿಂದಲೂ ಶವ ಸಂಸ್ಕಾರವನ್ನು ಮಾಡಿಕೊಂಡು ಬರುತ್ತಿದ್ದು, ಅಲ್ಲದೇ ರುದ್ರಭೂಮಿಯಾಗಿ ಬಳಸಲು 1999ರಲ್ಲಿ ಗ್ರಾಮ ಪಂಚಾಯತಿಯಲ್ಲೂ ತೀರ್ಮಾನವಾಗಿದೆ. ಆದರೆ ನಿನ್ನೆ ರಾತ್ರಿ ಕಿಡಿಗೇಡಿಗಳು ಸ್ಮಶಾನದಲ್ಲಿದ್ದ ಸಂಸ್ಕಾರಗೊಂಡ ಸ್ಥಳದಲ್ಲಿದ್ದ ಕಲ್ಲುಗಳನ್ನು ಕಿತ್ತು ತೆಗೆದುಕೊಂಡು ಹೋಗಿದ್ದಾರೆ’ ಎಂದರು.
‘ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಪಹಣಿಯಲ್ಲಿ ಸರ್ಕಾರಿ ಸ್ಮಶಾನ ಎಂದು ನಮೂದಿಸಬೇಕು’ ಎಂದು ಆಗ್ರಹಿಸಿದರು.
‘ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿದರು, ಅಲ್ಲದೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಗ್ರೇಡ್ 2 ತಹಶೀಲ್ದಾರ್ ಸೋಮಶೇಖರಯ್ಯ ಭೇಟಿ ನೀಡಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಅಹಿಂದ ಮುಖಂಡ ಆತಗೂರು ಲಿಂಗಯ್ಯ, ಜಿ.ಎನ್. ಮಂಜುನಾಥ್, ಪ್ರಸನ್ನ, ತಮ್ಮಯ್ಯ, ಶಂಕರ್ ಶಿವಲಿಂಗಯ್ಯ, ಜಯಮ್ಮ, ಲಕ್ಷ್ಮೀ, ಜಯಲಕ್ಷ್ಮಿ, ಸರೋಜಮ್ಮ ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.