ನಾಗಮಂಗಲ: ಅಪೂರ್ಣತ್ವದಿಂದ ಪೂರ್ಣತ್ವದೆಡೆಗೆ ಕೊಂಡೊಯ್ಯುವ, ಅಜ್ಞಾನದಿಂದ ನಮ್ಮನ್ನು ಜ್ಞಾನದ ಬೆಳಕೆನೆಡೆಗೆ ಕೊಂಡೊಯ್ಯುವ ನಿಜವಾದ ಶಕ್ತಿಯೇ ಗುರು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠದ ಬಿ.ಜಿ.ಎಸ್ ಸಭಾಂಗಣದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ಅವರು ನೀಡಿದರು.
‘ಸಾಧಕರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಹಿರಿಯರು ಜ್ಞಾನವನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂದು ನಾಲ್ಕು ಭಾಗಗಳಾಗಿ ಮಾಡಿದ್ದಾರೆ. ನಮ್ಮ ಬದುಕನ್ನು ಸುಂದರವಾಗುವಂತೆ ಮಾರ್ಗದರ್ಶನ ನೀಡಿದ ಗುರುಗಳನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ. ಜ್ಞಾನದ ಬೆಳಕು ಬುದ್ಧರು ಬೋಧನೆಯನ್ನು ಪ್ರಾರಂಭ ಮಾಡಿದ್ದು ಗುರು ಪೂರ್ಣಿಮೆಯ ದಿನವೇ. ಸಂನ್ಯಾಸವನ್ನು ಸ್ವೀಕರಿಸಿರುವವರ ಬದುಕು ಕತ್ತಿಯ ಮೇಲಿನ ನಡಿಗೆಯಂತೆ. ಸಮಾಜವನ್ನು ತಿದ್ದುವ ಮತ್ತು ಸರಿದಾರಿಯಲ್ಲಿ ಕೊಂಡೊಯ್ಯುವ ಹಾದಿಯಲ್ಲಿ ಸಂನ್ಯಾಸಿಗಳಿಗೆ ಹೆಚ್ಚು ಪರೀಕ್ಷೆ ಎದುರಾಗುತ್ತದೆ’ ಎಂದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಆಧುನಿಕ ಸಮಾಜದಲ್ಲಿ ಗುರುವಿಗಾಗಿ ಹಂಬಲಿಸುವ ಮನಸ್ಥಿತಿಯೂ ಕಡಿಮೆಯಾಗಿದೆ. ನಮ್ಮ ಸನಾತನ ಪರಂಪರೆಯನ್ನು ನೋಡಿದಾಗ ಗುರುವನ್ನು ಸ್ಮರಿಸುವುದು ಒಂದು ದಿನಕ್ಕೆ ಸೀಮಿತವಲ್ಲ. ಗುರುವು ಪ್ರತಿ ಕ್ಷಣವೂ ಕೂಡ ಶಿಷ್ಯರ ಏಳಿಗೆಗಾಗಿ ಶ್ರಮಿಸುತ್ತಾರೆ. ಅಂತ ಗುರುವನ್ನು ಪ್ರತಿಕ್ಷಣವೂ ಸ್ಮರಿಸಿದರೂ ಕಡಿಮೆಯೇ. ಆ ನಿಟ್ಟಿನಲ್ಲಿ ಗುರುಗಳ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ಗುರುಶಿಷ್ಯರ ಬಾಂಧವ್ಯ ಇಂದು ಕುಸಿಯುತ್ತಿದೆ. ನಾವು ಬೆಲೆಯುಳ್ಳ ವಸ್ತುಗಳನ್ನು ಖರೀದಿಸಬಹುದು. ಆದರೆ ನಮ್ಮ ಮೌಲ್ಯವನ್ನು ನಾವು ಬೆಳೆಸಿಕೊಳ್ಳಬೇಕು’ ಎಂದರು.
ಗುರುಪೂರ್ಣಿಮೆ ಅಂಗವಾಗಿ ಆದಿಚುಂಚನಗಿರಿ ಮಠದಲ್ಲಿ ಮುಂಜಾನೆಯಿಂದಲೇ ಹೋಮ ಹವನಗಳು ಜರುಗಿದವು. ಶ್ರೀ ಕಾಲಭೈರವೇಶ್ವರಸ್ವಾಮಿ ಸೇರಿದಂತೆ ಕ್ಷೇತ್ರಾಧಿದೇವತೆಗಳಾದ ಚಂದ್ರಮೌಳೇಶ್ವರ ಸ್ವಾಮಿ, ಗಂಗಾಧರೇಶ್ವರಸ್ವಾಮಿ, ಮಾಳಮ್ಮದೇವಿ ಮತ್ತು ಸ್ತಂಭಾಂಬಿಕೆ ದೇವಿಗೆ ನಿರ್ಮಲಾನಂದನಾಥ ಸ್ವಾಮೀಜಿ ಪೂಜೆ ಸಲ್ಲಿಸಿದರು. ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯನ್ನು ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಕುಂಬಳಗೋಡಿನ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಶೇಖರನಾಥ ಸ್ವಾಮೀಜಿ ಸೇರಿದಂತೆ ನೂರಾರು ಹಿರಿಯ ವಿದ್ಯಾರ್ಥಿಗಳು ಮತ್ತು ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.