ಕಿಕ್ಕೇರಿ: 21ವರ್ಷಗಳ ಹಿಂದಿನ ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮಗೆ ಪಾಠ ಕಲಿಸಿದ ಗುರುಗಳನ್ನು ಆಮಂತ್ರಿಸಿ ಗುರುವಂದನೆ ಸಲ್ಲಿಸಿ, ಮಾತು ಹರಟೆ ಮೂಲಕ ಸಂಭ್ರಮಿಸಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ (ಕೆಪಿಎಸ್)ಯಲ್ಲಿ 2003-04ನೇ ಸಾಲಿನಲ್ಲಿ ಓದಿದ ವಿದ್ಯಾರ್ಥಿಗಳು ಈಚೆಗೆ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಸೇರಿ ಗುರುವಿನೊಂದಿಗಿದ್ದ ಬಾಂಧವ್ಯ, ಹೆದರಿಕೆ, ಬೆದರಿಕೆ, ತುಂಟಾಟ, ಗುರುಗಳು ನೀಡಿದ ಬೆತ್ತದ ರುಚಿ, ಕುಣಿದು ಕುಪ್ಪಳಿಸಿದ ಹತ್ತಾರು ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿ ಜೀವನಕ್ಕೆ ಜಾರಿದರು.
ಗುರುವಂದನೆ ಹಾಗೂ ಸಹಪಾಠಿಗಳ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಲಿತವರು ಒಂದೆಡೆ ಸೇರಿದ ರಸಘಳಿಗೆಯಲ್ಲಿ ಪರಸ್ಪರ ಆಲಂಗಿಸಿಕೊಂಡು ಪುಳಕಿತರಾದರು. ಭವಿಷ್ಯ ರೂಪಿಸಿಕೊಟ್ಟ ಗುರುಗಳನ್ನು ಕಂಡು ಆನಂದಭಾಷ್ಪ ಸುರಿಸಿದರು. ಗುರುಗಳಿಗೆ ಆರತಿ ಬೆಳಗಿ, ಕರತಾಡನ ಮಾಡುತ್ತ ವೇದಿಕೆಗೆ ಕರೆತಂದರು. ಶಾಲು, ಹಾರ, ತುರಾಯಿ, ನೆನಪಿನ ಕಾಣಿಕೆ ನೀಡಿ ಆಶೀರ್ವಾದ ಪಡೆದರು.
ಗುರುಗಳಾದ ಎಸ್.ಕೆ. ದೇವರಾಜು, ಎಸ್.ಆರ್. ರಾಮಕೃಷ್ಣ, ಎಸ್.ಲಕ್ಕೇಗೌಡ, ಕೆ.ಎಸ್.ಪರಮೇಶ್ವರಯ್ಯ, ಎಸ್.ಶಂಕರಾಚಾರ್ಯ, ಮದರ್‌ಸಾಬ್, ಮೈಮುನಿಸ್ಸಾ, ಡಿ.ಲಿಂಗರಾಜು, ಸಿ.ಎಂ. ಸುಮಾ, ಎಚ್.ಬಿ.ಎನ್. ಪರಮೇಶ್ವರ್, ಆರ್. ಸುಧೀರ್, ಕಿರಣ್, ಪುರುಷೋತ್ತಮ್ ಶಿಷ್ಯರಿಂದ ಗೌರವ ಸ್ವೀಕರಿಸಿ ಬಾಯ್ತುಂಬಾ ಮಾತನಾಡಿದರು.
ಇಳಿಹೊತ್ತಿನಲ್ಲಿ ತಮ್ಮನ್ನು ನೆನಪಿಸಿಕೊಂಡು ಕರೆಯಿಸಿಕೊಂಡಿರುವುದಕ್ಕೆ ಖುಷಿಪಟ್ಟರು. ಯಾವುದೇ ಕೆಲಸ ಮಾಡಿ, ಒಳ್ಳೆಯ ರೀತಿ ಇರಲಿ, ಕೀಳರಿಮೆ ಬೇಡ. ಸಂಸ್ಕಾರ, ಸನ್ನಡತೆ ಬದುಕಿಗೆ ಅಳವಡಿಸಿಕೊಳ್ಳಿ, ಮಾದರಿಯಾಗಿ ಬದುಕಿ ಎಂದು ಹಾರೈಸಿದರು.
ಕೆಪಿಎಸ್ ಶಾಲಾ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಅಂದು– ಇಂದಿನ ಶಿಕ್ಷಣ, ಗುರು-ಶಿಷ್ಯ ಪರಂಪರೆ ಕುರಿತು ಮಾತನಾಡಿದರು.
ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ. ಬಸವರಾಜು, ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.