ಹಲಗೂರು: ಮಕ್ಕಳ ದಾಖಲಾತಿ ಕೊರತೆಯಿಂದ ಕೆಲವೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ, ಉತ್ತಮ ದಾಖಲಾತಿ ಇರುವ ಕೆಲ ಶಾಲೆಗಳು ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಿವೆ.
ಕೊಠಡಿಗಳ ಕೊರತೆ, ಶೌಚಾಲಯಗಳ ದುಸ್ಥಿತಿ, ಕಳಪೆ ಕಾಮಗಾರಿ ಮುಂತಾದ ಸಮಸ್ಯೆಗಳಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸಿಗುತ್ತಿಲ್ಲ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಬವಣೆ ಪಡುವಂತಾಗಿದೆ.
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 400ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಬಳಕೆಗೆ 8 ಕೊಠಡಿಗಳು ಮಾತ್ರ ಯೋಗ್ಯವಾಗಿವೆ. ಕೊಠಡಿ ಸಮಸ್ಯೆಯಿಂದ ಶಿಕ್ಷಕರು ಕೆಲವು ಸಮಯ ಸಭಾಂಗಣದಲ್ಲಿ ತರಗತಿ ನಡೆಸುತ್ತಿದ್ದಾರೆ. 2017ರಲ್ಲಿ ಆರಂಭವಾದ ಹೆಚ್ಚುವರಿ ಮೂರು ಕೊಠಡಿಗಳ ಕಟ್ಟಡ ನಿರ್ಮಾಣ 5 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಶಾಲಾ ಸಂಕೀರ್ಣದಲ್ಲಿ 2 ಶೌಚಾಲಯ ಮಾತ್ರ ಇದ್ದು, ಶೌಚಾಲಯದ ಸಮಸ್ಯೆಯೂ ಕಾಡುತ್ತಿದೆ.
ಮಕ್ಕಳ ದಾಖಲಾತಿ ಇಲ್ಲದೇ ಮುಚ್ಚಿದ್ದ ಮೇಗಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ಮತ್ತೆ ಪ್ರಾರಂಭವಾಗಿ ಪ್ರಸ್ತುತ 38 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ 3 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯ ತಲುಪಿವೆ. ಗೋಡೆಗಳು ಬಿರುಕು ಬಿಟ್ಟು, ಹೆಂಚುಗಳ ಒಡೆದು ಹೋಗಿದ್ದು ಚಾವಣಿಯು ಕುಸಿಯುವ ಸ್ಥಿತಿಯಲ್ಲಿದೆ. ಆತಂಕದ ನಡುವೆ ಶಿಕ್ಷಕರು ಹಾಗೂ ಮಕ್ಕಳು ದಿನದೂಡುವಂತಾಗಿದೆ.
ಯತ್ತಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದು, ಮೂರು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. 4 ಕೊಠಡಿಗಳು ಮಾತ್ರ ಬಳಕೆಗೆ ಲಭ್ಯವಿದ್ದು, ಕೊಠಡಿ ಸಮಸ್ಯೆ ಎದುರಿಸುವಂತಾಗಿದೆ. 80 ಮಕ್ಕಳು ಮತ್ತು ಶಿಕ್ಷಕರಿಗೆ ಒಂದೇ ಶೌಚಾಲಯವಿದ್ದು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಪೋಷಕರ ಖಾಸಗಿ ಶಾಲಾ ವ್ಯಾಮೋಹದ ನಡುವೆಯೂ ಶಿಕ್ಷಕರ ಅಪಾರ ಕಾಳಜಿ ಮತ್ತು ಸ್ಥಳೀಯ ಶಿಕ್ಷಣಾಸಕ್ತರ ನೆರವಿನಿಂದ ಹಲವಾರು ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿದ ದಾಖಲಾತಿ ಹೆಚ್ಚಾಗುತ್ತಿದೆ. ಸ್ಥಳೀಯ ಸಮಾಜ ಸೇವಕರು, ನೌಕರರು, ದಾನಿಗಳು ತಮ್ಮ ಸ್ವಂತ ಹಣದಿಂದ ಹಲವೆಡೆ ಪ್ರಾಥಮಿಕ ಪೂರ್ವ ತರಗತಿಗಳನ್ನು ಆರಂಭಿಸಿ ಸ್ವಂತ ಹಣದಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಸರ್ಕಾರಿ ಶಾಲೆಗಳ ಉಳಿವಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಸರ್ಕಾರದ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೈಜೋಡಿಸಿ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಶಾಲಾ ಕೊಠಡಿಗಳ ದುರಸ್ತಿ, ಶೌಚಾಲಯ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಕಾರ್ಯ ಪ್ರವೃತ್ತರಾದರೇ ಮತ್ತಷ್ಟು ದಾಖಲಾತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎನ್ನುತ್ತಾರೆ ಪೋಷಕರು.
Cut-off box - ಏನಂತಾರೆ..? ಸರ್ಕಾರಿ ಶಾಲೆಗೆ ಮೂಲಸೌಕರ್ಯ ಕಲ್ಪಿಸಲಿ ಗ್ರಾಮೀಣ ಪ್ರದೇಶದಲ್ಲಿ ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳ ನೆರವಿನಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿದೆ. ಸಂಬಂಧಿಸಿದ ಇಲಾಖೆ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಕೆಂಪರಾಜು ಶಿಕ್ಷಣ ಪ್ರೇಮಿ ಯತ್ತಂಬಾಡಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ ಇತ್ತೀಚಿನ ದಿನಗಳಲ್ಲಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಉತ್ತಮ ವಾತಾವರಣ ಕಲ್ಪಿಸಿಕೊಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯೋಜನೆ ರೂಪಿಸಬೇಕು ಡಿ.ಎಲ್.ಮಾದೇಗೌಡ ಗ್ರಾಮಸ್ಥರು ದಳವಾಯಿ ಕೋಡಿಹಳ್ಳಿ ಸಮಸ್ಯೆ ಬಗೆಹರಿಸಲು ಕ್ರಮ ಹಲಗೂರು ಹೋಬಳಿಯ ವ್ಯಾಪ್ತಿಯಲ್ಲಿನ 17 ಶಾಲೆಗಳಲ್ಲಿ 30 ಕೊಠಡಿಗಳ ಅಗತ್ಯವಿದೆ. 19 ಶೌಚಾಲಯ ಮತ್ತು 14 ಬಿಸಿಯೂಟದ ಅಡುಗೆ ಮನೆಗಳ ಕೊರತೆ ಇದೆ ಎಂದು ಗುರುತಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ವಿ.ಈ.ಉಮಾ ಕ್ಷೇತ್ರ ಶಿಕ್ಷಣಾಧಿಕಾರಿ ಮಳವಳ್ಳಿ
Cut-off box - ಬಳಕೆಗೆ ಬಾರದ ಶೌಚಾಲಯ ದಳವಾಯಿಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70 ಮಕ್ಕಳು ಕಲಿಯುತ್ತಿದ್ದು ಸೋರುತ್ತಿದ್ದ ಕಟ್ಟಡವನ್ನು ಇತ್ತೀಚೆಗೆ ದುರಸ್ತಿಗೊಳಿಸಲಾಗಿದೆ. ಉಳಿದ ಕೊಠಡಿಗಳು ಮಳೆ ಬಂದರೇ ಸೋರುತ್ತಿವೆ. ಕೆಲವಡೆ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಶಾಲೆಯಲ್ಲಿನ ಶೌಚಾಲಯ ಸಂಪೂರ್ಣವಾಗಿ ಹಾಳಾಗಿದೆ. ಶೌಚಾಲಯ ಮಕ್ಕಳ ಬಳಕೆಗೆ ಯೋಗ್ಯವಿಲ್ಲದಂತಾಗಿದ್ದು ಮೂಗು ಮುಚ್ಚಿ ತಿರುಗಾಡಬೇಕಿದೆ.
Cut-off box - ಕಳಪೆ ಕಾಮಗಾರಿ ಆರೋಪ ಲಿಂಗಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಹಳೆಯ ಕಟ್ಟಡದ ಕೊಠಡಿಗಳ ಚಾವಣಿಯನ್ನು ಕೆಲ ದಿನಗಳ ಹಿಂದೆ ದುರಸ್ತಿ ಮಾಡಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ಮಳೆ ಬಂದರೆ ನೀರು ಸೋರುತ್ತಿದೆ. ನಂದೀಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳಿದ್ದು ಕೆಲವು ದಿನಗಳ ಹಿಂದೆ ಸಂಪೂರ್ಣ ದುರಸ್ತಿ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಕೊಠಡಿ ಚಾವಣಿಯು ಹಾಳಾಗಿ ಬಳಕೆಗೆ ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.