ADVERTISEMENT

ಮಂಡ್ಯ| ಭಾರಿ ಮಳೆಗೆ ಜಮೀನು ಜಲಾವೃತ, ರಸ್ತೆ ಬಂದ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 4:02 IST
Last Updated 2 ಆಗಸ್ಟ್ 2022, 4:02 IST
ಮಳೆಯಿಂದ ಜಲಾವೃತಗೊಂಡಿರುವ ಪ್ರದೇಶ
ಮಳೆಯಿಂದ ಜಲಾವೃತಗೊಂಡಿರುವ ಪ್ರದೇಶ    

ಮಂಡ್ಯ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಹೊರವಲಯದಲ್ಲಿರುವ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣ ವಿವಿಧೆಡೆ ರಸ್ತೆ ಸಂಪರ್ಕ ಬಂದ್‌ ಆಗಿದೆ.

ಮಳೆ ನಿಂತು ಹಲವು ಗಂಟೆಗಳು ಕಳೆದರೂ ಹಳ್ಳಗಳು ಮಂಗಳವಾರ ಬೆಳಿಗ್ಗೆ 9 ಗಂಟೆಯಾದರೂ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಭತ್ತ, ಕಬ್ಬಿನ ಗದ್ದೆಗಳು ಜಲಾವೃತವಾಗಿದ್ದು ಕೆರೆಯಂತಾಗಿವೆ. ಮಂಡ್ಯ– ಹೊಳಲು ರಸ್ತೆಯ ಸಂಪರ್ಕ ಬಂದ್‌ ಆಗಿದ್ದು ಮೇಲುಕೋಟೆ ಕಡೆಗೆ ತೆರಳುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ಮಾರ್ಗದಲ್ಲಿ ಬರುವ 3 ಸೇತುವೆಗಳ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು ಅಪಾಯ ಸನ್ನಿವೇಶ ಸೃಷ್ಟಿಯಾಗಿದೆ. ಸ್ಥಳೀಯರು ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ. ರಾಷ್ಟ್ರೀಯ ಹೆದ್ಧಾರಿ ಮೇಲ್ಸೇತುವೆ ಕೆಳಗೆ ಮಂಡಿಯುದ್ದ ನೀರು ಹರಿಯುತ್ತಿದೆ.

ADVERTISEMENT

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆ, ಕಾಲುವೆಗಳು, ಪೈಪ್‌ಲೈನ್‌ಗಳು ಒಡೆದು ಹೋಗಿವೆ. ಕಾಮಗಾರಿಗೆ ಬೇಕಾದ ವಸ್ತುಗಳ ಸಾಗಣೆಗೆ ಭಾರಿ ವಾಹನಗಳು ಓಡಾಡುವ ಕಾರಣ ಪೈಪ್‌ಲೈನ್‌ಗಳು ಹಾಳಾಗಿವೆ. ಹೀಗಾಗಿ ನೀರು ಸಾರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರಸ್ತೆ, ಜಮೀನುಗಳಿಗೆ ನುಗ್ಗುತ್ತಿದೆ.

ನಿವಾಸಿಗಳ ಪರದಾಟ: ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಳಿಜಾರಿನ ಪ್ರದೇಶದಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿರುವ ಕಾರಣ ಜನರು ಸೋಮವಾರ ರಾತ್ರಿಯಿಡೀ ಪರದಾಡಿದ್ದಾರೆ. ಬೀಡಿಕಾರ್ಮಿಕರ ಕಾಲೊನಿ, ತಮಿಳು ಕಾಲೊನಿ, ಹಾಲಹಳ್ಳಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.