ಶ್ರೀರಂಗಪಟ್ಟಣ: ‘ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ನೀಡುವ ಪರಿಹಾರದ ಜತೆಗೆ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ರೂ.8,500 ಹೆಚ್ಚುವರಿ ಪರಿಹಾರ ನೀಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ದರಸಗುಪ್ಪೆ ಬಳಿ ಸಿಡಿಎಸ್ ನಾಲೆ ಒಡೆದಿರುವ ಹಾಗೂ ಕೂಡಲಕುಪ್ಪೆ ಬಳಿ ಬೆಳೆ ಹಾನಿ ಸಂಭವಿಸಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
‘ಎನ್‌ಡಿಆರ್‌ಎಫ್ ಮಾನದಂಡದಂತೆ ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಬೆಳೆಗೆ ₹ 8,500 ಪರಿಹಾರ ಸಿಗಲಿದೆ. ಇದರ ಜತೆಗೆ ರಾಜ್ಯ ಸರ್ಕಾರ ₹8,500 ನೀಡಲಿದೆ. ನೀರಾವರಿ ಆಶ್ರಿತ ಬೆಳೆಗೆ ಎನ್‌ಡಿಆರ್‌ಎಫ್‌ನಿಂದ ಪ್ರತಿ ಹೆಕ್ಟೇರ್‌ಗೆ ₹ 17,000 ಮತ್ತು ರಾಜ್ಯ ಸರ್ಕಾರದಿಂದ ₹8,500 ಸೇರಿ ₹25,500 ಸಿಗಲಿದೆ. ಬಹು ವಾರ್ಷಿಕ ಬೆಳೆಗೆ ಎನ್‌ಡಿಆರ್‌ಎಫ್‌ನ ₹ 22,500 ಹಾಗೂ ರಾಜ್ಯ ಸರ್ಕಾರದ ₹8,500 ಸೇರಿ ಒಟ್ಟು ₹31,000 ಪರಿಹಾರ ನೀಡಲಾಗುತ್ತದೆ. ಬೆಳೆ ವಿಮೆ ಮಾಡಿಸಿರುವ ರೈತರಿಗೆ ಪ್ರತ್ಯೇಕ ಪರಿಹಾರ ಸಿಗಲಿದೆ’ ಎಂದು ಹೇಳಿದರು.
‘ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯ ನಡೆಸಿ ವರದಿ ನೀಡಿದ ನಂತರ ಸಂತ್ರಸ್ತ ರೈತರಿಗೆ ಪರಿಹಾರ ನೀಡಲಾಗುತ್ತದೆ. ಅತಿವೃಷ್ಟಿಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಸುಮಾರು 80 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಹಾನಿಯ ಬಗ್ಗೆ ವಸ್ತುನಿಷ್ಠ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಸಿದಿರುವ ಸಿಡಿಎಸ್ ನಾಲೆ ಏರಿಯ ದುರಸ್ತಿ ಕಾರ್ಯ ಮಳೆ ನಿಂತ ಕೂಡಲೇ ಆರಂಭವಾಗಲಿದ್ದು, ಇನ್ನು ಎರಡು ವಾರಗಳಲ್ಲಿ ದುರಸ್ತಿ ಕಾರ್ಯ ಮುಗಿಯಲಿದೆ’ ಎಂದು ಸಚಿವರು ತಿಳಿಸಿದರು.
ಪರಿಹಾರ ಹೆಚ್ಚಿಸಲು ಆಗ್ರಹ: ‘ಅತಿವೃಷ್ಟಿಯಿಂದ ಸಂಭವಿಸುವ ಬೆಳೆ ಹಾನಿಗೆ ಸರ್ಕಾರ ನೀಡುವ ಪರಿಹಾರ ತೀರಾ ಕಡಿಮೆ ಇದೆ. ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಕೊರೆದಿರುವ ಕೃಷಿ ಜಮೀನು ಸಮತಟ್ಟು ಮಾಡಿಸಿಕೊಡಬೇಕು’ ಎಂದು ರೈತ ಮುಖಂಡ ಕೆನ್ನಾಳು ವಿಜಯಕುಮಾರ್ ಒತ್ತಾಯಿಸಿದರು.
‘ಈ ಸಂಬಂಧ ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.
ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್. ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಅಶೋಕ್, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು.
‘ಡಿನ್ನರ್ ಸಹಜ: ರಾಜಕೀಯ ಸಂಬಂಧ ಕಲ್ಪಿಸುವುದು ಸರಿಯಲ್ಲ’ ‘
ಪ್ರಗತಿ ಪರಿಶೀಲನೆ ಉದ್ದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಔತಣ ಕೂಟ ಏರ್ಪಡಿಸುವುದು ಸಹಜ. ಆಗಾಗ ಇಂತಹ ಡಿನ್ನರ್‌ಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ರಾಜಕೀಯ ಬೆಳವಣಿಗೆಯ ಸಂಬಂಧ ಕಲ್ಪಿಸುವುದು ಸರಿಯಲ್ಲ’ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಬಿಹಾರ ಚುನಾವಣೆ ಫಲಿತಾಂಶ ನ.14ಕ್ಕೆ ಹೊರ ಬೀಳಲಿದ್ದು ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಲಿದ್ದಾರೆ. ನನಗಿರುವ ಮಾಹಿತಿಯ ಪ್ರಕಾರ ಭಾನುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಹ ಚರ್ಚೆ ನಡೆಯುವುದಿಲ್ಲ’ ಎಂದರು. ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊನ್ನೆಯಷ್ಟೇ ನನಗೆ ಸಿಕ್ಕಿದ್ದರು. ಅವರು ಗೊಂದಲದಲ್ಲಿದ್ದಾರೆ ಎಂದು ಅನಿಸಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.