ADVERTISEMENT

ಹೇಮಾವತಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 12:53 IST
Last Updated 15 ಜನವರಿ 2025, 12:53 IST
ಮುದುಗೆರೆ ರಾಜೇಗೌಡ
ಮುದುಗೆರೆ ರಾಜೇಗೌಡ   

ಕೆ.ಆರ್.ಪೇಟೆ: ‘ತಾಲ್ಲೂಕಿನ ನೀರಾವರಿ ವ್ಯವಸಾಯಕ್ಕೆ ಜೀವನದಿಯಾಗಿರುವ ಹೇಮಾವತಿನದಿಯ ಗೊರೂರು ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದಿಂದ ನಾಲೆಗಳ ಮೂಲಕ ಬೇಸಿಗೆ ಬೆಳೆಗೆ ನೀರು ಹರಿಸಬೇಕು’ ಎಂದು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ ಒತ್ತಾಯಿಸಿದರು.

‘ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕಿನ ಕೆಲವು ಪ್ರದೇಶಗಳು ಹೇಮಾವತಿ ನೀರನ್ನು ಆಶ್ರಯಿಸಿ ಬದುಕುತ್ತಿವೆ. ತೀವ್ರ ಬರಗಾಲ ಮತ್ತಿತರ ಕೆಲವು ಕಾರಣಗಳಿಂದ ಹೇಮಾವತಿ ಜಲಾನಯನ ಪ್ರದೇಶದ ರೈತರು ಕೆಲವು ವರ್ಷಗಳಿಂದ ಬೇಸಿಗೆ ಬೆಳೆಯನ್ನು ಬೆಳೆಯಲಾಗಿಲ್ಲ. ಪ್ರಸಕ್ತ ವರ್ಷ ಜಲಾಶಯ ನೀರಿನಿಂದ ತುಂಬಿ ತುಳುಕುತ್ತಿದೆ. ಇದನ್ನು ಗಮನಿಸಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸಲು ಅಗತ್ಯ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ತಾಲ್ಲೂಕಿನ ಮಂದಗೆರೆ ಮತ್ತು ಹೇಮಗಿರಿ ಬಳಿ ಹೇಮಾವತಿ ನದಿಗೆ ಒಡ್ಡು ಅಣೆಕಟ್ಟೆ ನಿರ್ಮಿಸಿದ್ದು ರಾಜ ಮಹಾರಾಜರ ಕಾಲದಿಂದಲೂ ಈ ನಾಲಾ ವ್ಯಾಪ್ತಿಯ ರೈತರು ಸಮೃದ್ಧವಾಗಿ ಭತ್ತ, ಕಬ್ಬು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲವು ವರ್ಷಗಳಿಂದ ನದಿ ಅಣೆಕಟ್ಟೆ ನಾಲೆಗಳಿಗೂ ನೀರಾವರಿ ಇಲಾಖೆ ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದ್ದು ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನಾಲೆಗೆ ಭತ್ತದ ಬೆಳೆಗೆ ಪರಿಪೂರ್ಣ ನೀರು ಹರಿಸಲು ಕ್ರಮವಹಿಸಿಬೇಕು. ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ರೈತರ ಪರವಾಗಿ ಸಂಘಟಿತ ಧ್ವನಿ ಎತ್ತಬೇಕು. ನೀರು ಹರಿಸದಿದ್ದರೆ ರೈತಸಂಘ ನೀರಿಗಾಗಿ ಹೋರಟ ನಡೆಸಲಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.