ADVERTISEMENT

ಹೆದ್ದಾರಿ ಕಾಮಗಾರಿ: ಸಂಚಾರ ದಟ್ಟಣೆ

ಮದ್ದೂರು ಪಟ್ಟಣದಲ್ಲಿ ನಿತ್ಯ ವಾಹನ ಸವಾರರ ಪ‍ರದಾಟ

ಎಂ.ಆರ್.ಅಶೋಕ್ ಕುಮಾರ್
Published 11 ನವೆಂಬರ್ 2020, 5:18 IST
Last Updated 11 ನವೆಂಬರ್ 2020, 5:18 IST
ಮದ್ದೂರಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ
ಮದ್ದೂರಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ   

ಮದ್ದೂರು: ಹೆದ್ದಾರಿ ವಿಸ್ತರಣೆ ಹಾಗೂ ಮೇಲ್ಸೇತುವೆ ಕಾಮಗಾರಿಯಿಂದ ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿ, ನಿತ್ಯ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದೆ.

ತಾಲ್ಲೂಕು ನಿಡಘಟ್ಟದಿಂದ ಪಟ್ಟಣದ ಚನ್ನೇಗೌಡನದೊಡ್ಡಿವರೆಗೂ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕೊಲ್ಲಿ ವೃತ್ತದಿಂದ ಎಪಿಎಂಸಿ ಎಳನೀರು ಮಾರುಕಟ್ಟೆವರೆಗೂ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ.

ಸುಮಾರು 3 ಕಿ.ಮೀ ವರೆಗೆ ಕಾಮಗಾರಿ ನಡೆಸಲು ಅನುಕೂಲವಾಗುವ ಹಾಗೆ ಎರಡೂ ಕಡೆ ಕಬ್ಬಿಣದ ತಡೆಗೋಡೆಗಳನ್ನು ಹಾಕಲಾಗಿದೆ. ಆದ್ದರಿಂದ ಎರಡೂ ಕಡೆ ರಸ್ತೆಗಳು ಕಿರುದಾಗಿದ್ದು, ಸಂಚಾರ ದಟ್ಟಣೆ ಹೆಚ್ಚಿರುತ್ತದೆ.

ADVERTISEMENT

ಪಟ್ಟಣದ ಎಲ್ಐಸಿ ಕಚೇರಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ತಾಲ್ಲೂಕು ಕಚೇರಿಯ ಬಳಿ ನಿತ್ಯ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ.

‘ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅಗತ್ಯವಿರುವ ಕಡೆ ಸೂಕ್ತ ಮಾರ್ಗಸೂಚಿ ಫಲಕಗಳನ್ನು ಹಾಕಬೇಕು, ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು, ಆ ಮೂಲಕ ರಾತ್ರಿ ವೇಳೆ ಆಗುವ ಅಪಘಾತಗಳನ್ನು ತಪ್ಪಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಾತ್ರಿ ವೇಳೆ ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದ್ದು, ಕಾಮಗಾರಿ ನಡೆಸುತ್ತಿರುವ ಕಂಪನಿಯವರು ಈ ಕೂಡಲೇ ಗಮನ ಹರಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಪುರಸಭಾ ಸದಸ್ಯಎಂ.ಪಿ.ಮಂಜುನಾಥ್ ಆಗ್ರಹಿಸಿದರು.

‌‘ಪಿಲ್ಲರ್‌ಗಳ ನಿರ್ಮಾಣ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಕಂಪನಿಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಕ್ರಮ ವಹಿಸುತ್ತೇನೆ’ ಎಂದು ಪುರಸಭೆ ಮುಖ್ಯಧಿಕಾರಿ ಮುರುಗೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.