ADVERTISEMENT

ಪ್ರವಾಹ: ನಿರಾಶ್ರಿತ ಮುಸ್ಲಿಂ ಕುಟುಂಬಗಳಿಗೆ ಆಶ್ರಯ ನೀಡಿದ ಹಿಂದೂ ದಂಪತಿ

ಮಂಡ್ಯದ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಮಾನವೀಯತೆ ಮೆರೆದ ದಂಪತಿ

ಎಂ.ಎನ್.ಯೋಗೇಶ್‌
Published 6 ಆಗಸ್ಟ್ 2022, 3:48 IST
Last Updated 6 ಆಗಸ್ಟ್ 2022, 3:48 IST
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಶಾ–ಸಿದ್ದರಾಮು ಮನೆಯಲ್ಲಿ ಒಬ್ಬಟ್ಟು ಊಟಕ್ಕೆ ಮೈದಾ ಸಿದ್ಧಗೊಳಿಸುತ್ತಿರುವ ಸಲ್ತಾನತ್‌. ಮೆರರುನ್ನೀಸಾ, ಶಾಬಾನಾ, ಆಶಾ, ನೂರ್‌ ಸಲ್ಮಾ ಇದ್ದಾರೆ
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಶಾ–ಸಿದ್ದರಾಮು ಮನೆಯಲ್ಲಿ ಒಬ್ಬಟ್ಟು ಊಟಕ್ಕೆ ಮೈದಾ ಸಿದ್ಧಗೊಳಿಸುತ್ತಿರುವ ಸಲ್ತಾನತ್‌. ಮೆರರುನ್ನೀಸಾ, ಶಾಬಾನಾ, ಆಶಾ, ನೂರ್‌ ಸಲ್ಮಾ ಇದ್ದಾರೆ   

ಮಂಡ್ಯ: ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿರುವ ನಗರದ ಬೀಡಿ ಕಾರ್ಮಿಕರ ಕಾಲೊನಿಯ ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಅದೇ ಬಡಾವಣೆಯ ಆಶಾ–ಸಿದ್ದರಾಮು ದಂಪತಿ ಐದು ದಿನದಿಂದ ಆಶ್ರಯ ನೀಡಿದ್ದಾರೆ. ಸಣ್ಣ ಮನೆಯಲ್ಲೇ ಸಂಕಷ್ಟದಲ್ಲಿರುವವರ ಕಾಳಜಿ ಮಾಡುತ್ತಿದ್ದಾರೆ.

ಸಾವಿರಕ್ಕೂ ಹೆಚ್ಚು ಕುಟುಂಬಗಳ ಕಾಲೊನಿಯಲ್ಲಿ ಮುಸ್ಲಿಮರೇ ಹೆಚ್ಚಿದ್ದು, ಮಳೆ ನೀರಿನ ಜೊತೆ ವಿ.ಸಿ ನಾಲೆ ನೀರು ಕೂಡ ನುಗ್ಗಿದ್ದು, ಇಡೀ ಬಡಾವಣೆ ಜಲಾವೃತಗೊಂಡಿದೆ.

ಆಶ್ರಯ ಯೋಜನೆಯಡಿ ‌ರೈತ ದಂಪತಿ ನಿರ್ಮಿಸಿಕೊಂಡಿರುವ ಹೊಸ ಮನೆ ಎತ್ತರದಲ್ಲಿರುವುದರಿಂದ ನೀರು ನುಗ್ಗಿಲ್ಲ. ಸುತ್ತಲಿನ ಮನೆಗಳಿಗೆ ನೀರು ನುಗ್ಗಿದ್ದು, ದವಸ, ಧಾನ್ಯ, ಬಟ್ಟೆ ಬರೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳ ಮಹಿಳೆಯರು ಹಾಗೂ ಮಕ್ಕಳನ್ನು ದಂಪತಿ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯರು ಅಲ್ಲಿಯೇ ಒಟ್ಟಾಗಿ ಅಡುಗೆ
ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ದಂಪತಿಯ ಮಗ ಚೇತನ್‌ಗೌಡ ಅವರು ಮಕ್ಕಳಿಗೆ ನಿತ್ಯ ಹಾಲು, ಔಷಧ, ಕ್ಯಾನ್‌ನಿಂದ ಶುದ್ಧ ಕುಡಿಯುವ ನೀರು ತಂದು ಕೊಡುತ್ತಿದ್ದಾರೆ.

‘ಆ.1ರಂದು ಮಧ್ಯರಾತ್ರಿಯಲ್ಲಿ ಮನೆಗೆ ನೀರು ನುಗ್ಗಿತು. ನೋಡುತ್ತಿದ್ದಂತೆ ವಸ್ತುಗಳೆಲ್ಲವೂ ಮುಳುಗಿದವು, ವಿದ್ಯುತ್‌ ಕೂಡ ಇರಲಿಲ್ಲ. ಹೊರಗೆ ಬರಲೂ ಸಾಧ್ಯವಾಗದೇ ಸಿಲುಕಿಕೊಂಡಿದ್ದೆವು. ಆಗ ಆಶಾ– ಸಿದ್ದರಾಮು 1 ಗಂಟೆ ರಾತ್ರಿಯಲ್ಲಿ ನಮ್ಮ ಕುಟುಂಬವನ್ನು ರಕ್ಷಿಸಿ ತಮ್ಮ ಮನೆಗೆ ಕರೆದೊಯ್ದರು. ಮಧುಮೇಹದಿಂದ ಬಳಲುತ್ತಿರುವ ನನಗೆ ಔಷಧಿಯನ್ನೂ ಕೊಡಿಸಿದ್ದಾರೆ. ಅವರ ಋಣವನ್ನು ತೀರಿಸುವುದು ಹೇಗೆ’ ಎಂದು ಪ್ರಶ್ನಿಸುತ್ತಾ ಮೆಹರುನ್ನೀಸಾ ಭಾವುಕರಾದರು.

‘ಸಂಕಷ್ಟದಲ್ಲಿರುವ ಬಡಾವಣೆ ಜನರಿಗೆ ಹಲವು ಸಂಘ–ಸಂಸ್ಥೆಗಳು ಆಹಾರ ಪೂರೈಸುತ್ತಿವೆ. ಕಾಳಜಿ ಕೇಂದ್ರ ಸಹ ತೆರೆಯಲಾಗಿದೆ. ಆದರೆ ಆಶಾ–ಸಿದ್ದರಾಮು ತೋರುತ್ತಿರುವ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ’ ಎಂದು ನಗರಸಭೆ ಸದಸ್ಯ ಜಾಕೀರ್‌ ಪಾಷಾ ಹೇಳಿದರು.

ಹಿಂದೂ– ಮುಸ್ಲಿಮರ ಹಬ್ಬ ಆಚರಣೆ
ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಶಾ ಅವರೊಂದಿಗೆ ಮುಸ್ಲಿಂ ಮಹಿಳೆಯರೂ ಒಟ್ಟಾಗಿ ಆಚರಿಸಿದರು. ಬೆಳಿಗ್ಗೆ ಸರಳವಾಗಿ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಒಬ್ಬಟ್ಟು ಊಟಕ್ಕೆ ಸಲ್ತಾನತ್‌ ಮೈದಾ ಸಿದ್ಧಗೊಳಿಸಿದರೆ, ನೂರ್‌ ಸಲ್ಮಾ ಹೂರಣ ಮಾಡಿದರು. ಆಶಾ ಒಬ್ಬಟ್ಟು ಬೇಯಿಸಿದರು.

‘ನಾವೇನೂ ಶ್ರೀಮಂತರಲ್ಲ, ಬಡತನದಲ್ಲೇ ಇದ್ದೇವೆ. ಆದರೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯತ್ವ ಗುಣ’ ಎಂದು ಆಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.