ADVERTISEMENT

ಮಂಡ್ಯ: ಐತಿಹಾಸಿಕ ದಾಖಲೆ, ನಾಣ್ಯಗಳ ಪ್ರದರ್ಶನ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗಮನಸೆಳೆದ ಹಳೆಯ ಪತ್ರಿಕೆಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:06 IST
Last Updated 16 ಮೇ 2025, 16:06 IST
ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ ಒಂದು ದಿನದ ಐತಿಹಾಸಿಕ ದಾಖಲೆಗಳು ಭಿತ್ತಿಪತ್ರ ಪ್ರದರ್ಶನ ಹಾಗೂ ನಾಣ್ಯಗಳ ಪ್ರದರ್ಶನ ನಡೆಯಿತು
ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ ಒಂದು ದಿನದ ಐತಿಹಾಸಿಕ ದಾಖಲೆಗಳು ಭಿತ್ತಿಪತ್ರ ಪ್ರದರ್ಶನ ಹಾಗೂ ನಾಣ್ಯಗಳ ಪ್ರದರ್ಶನ ನಡೆಯಿತು   

ಮಂಡ್ಯ: ಇಲ್ಲಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ ಒಂದು ದಿನದ ಐತಿಹಾಸಿಕ ದಾಖಲೆಗಳು ಭಿತ್ತಿಪತ್ರ ಪ್ರದರ್ಶನ ಹಾಗೂ ನಾಣ್ಯಗಳ ಪ್ರದರ್ಶನ ನಡೆಯಿತು. 

ಕಾಲೇಜಿನ ಪ್ರಾಂಶುಪಾಲ ಗುರುರಾಜ ಪ್ರಭು ಕೆ. ಮತ್ತು ಮಂಡ್ಯ ಜಿಲ್ಲೆಯ ಪ್ರಸಿದ್ಧ ನಾಣ್ಯ ಸಂಗ್ರಹಕಾರ ಮಧುಕರ್ ಅವರು ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮಧುಕರ್ ಮಾತನಾಡಿ, ‘ನಾಣ್ಯಗಳು ಆಯಾ ಕಾಲದ ಆರ್ಥಿಕ ಸ್ಥಿತಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಇತಿಹಾಸವನ್ನು ಕಟ್ಟಲು ನಾಣ್ಯಗಳು ಪ್ರಾಥಮಿಕ ಆಕರಗಳಾಗುತ್ತವೆ. ಆದ್ದರಿಂದ  ವಿದ್ಯಾರ್ಥಿಗಳಾದ ತಾವು ಇಂತಹ ವಿಶೇಷ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ವಿವರಿಸಿದರು.

ADVERTISEMENT

ಚೋಳರ ಕಾಲದ ನಾಣ್ಯಗಳಿಂದ ಹಿಡಿದು ಹಿಂದಿನವರೆಗೆ ನಾಣ್ಯಗಳು ಬೆಳೆದು ಬಂದ ಬಗೆ ವಿವಿಧ ಮಾದರಿಯ ನೋಟುಗಳು ವಿದೇಶಿ ನೋಟುಗಳು, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮೊದಲಾದವುಗಳನ್ನು ಪ್ರದರ್ಶಿಸಲಾಯಿತು. 

ಈ ಪ್ರದರ್ಶನದಲ್ಲಿ 1940ರಿಂದ ಪ್ರಸ್ತುತದವರೆಗೂ ಹಳೆಯ ವಾರಪತ್ರಿಕೆಗಳು ದಿನಪತ್ರಿಕೆಗಳನ್ನು ಪ್ರದರ್ಶಿಸಲಾಯಿತು. 1947ರ ಸ್ವಾತಂತ್ರ‍್ಯ ದಿನಾಚರಣೆಯ ದಿನದ ಪತ್ರಿಕೆ, ಗಣರಾಜ್ಯ ದಿನದ ಪತ್ರಿಕೆ, ಕರ್ನಾಟಕ ಏಕೀಕರಣದ ಪತ್ರಿಕೆ, ಮೊದಲಾದ ಮಹತ್ವದ ದಿನದ ಪತ್ರಿಕೆಯ ಮುಖಪುಟಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು.

ಐತಿಹಾಸಿಕ ದಾಖಲೆಗಳಾದ ತಾಳೆಗರಿ ಹಾಗೂ ಕೋರ ಬಟ್ಟೆಯಿಂದ ನಿರ್ಮಿತವಾದ ಹಳೆಯ ದಾಖಲೆಯನ್ನು ಪ್ರದರ್ಶಿಸಲಾಯಿತು. 

ಸ್ನಾತಕ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಕೃಷ್ಣೇಗೌಡ ಮಾತನಾಡಿದರು. ಪ್ರಾಧ್ಯಾಪಕರಾದ ಶಿವರಾಮು ಎಸ್., ಕವಿತಾ, ಶಾಂತರಾಜು ಟಿ ಎನ್, ಭರತ್ ರಾಜ್, ಪದ್ಮನಾಭ ಕೆ.ಎ., ಪ್ರಸನ್ನ ಕುಮಾರ್ ಕೆ.ಎಂ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.