ADVERTISEMENT

ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:29 IST
Last Updated 13 ಡಿಸೆಂಬರ್ 2025, 2:29 IST

ಮಂಡ್ಯ: ವಿಚ್ಛೇದನ ಪಡೆದು ಪ್ರತ್ಯೇಕ ಜೀವನ ನಡೆಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಅಪರಾಧಿ ಪತಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಸುರೇಶ್ ಶಿಕ್ಷೆಗೆ ಗುರಿಯಾದವನು. ಕಳೆದ 18  ವರ್ಷಗಳ ಹಿಂದೆ ಅದೇ ಗ್ರಾಮದ ಶಾಲಿನಿ ಎಂಬುವರನ್ನು ಮದುವೆಯಾಗಿದ್ದನು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.

ಕೌಟುಂಬಿಕ ಕಲಹದಿಂದ ಶಾಲಿನಿ ಅವರು ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸವಾಗಿದ್ದರು. ಸುರೇಶ್ ಶಾಲಿನಿಯೊಂದಿಗೆ ಜೀವನ ನಡೆಸಲು ಮುಂದಾದಾಗ ಇದಕ್ಕೆ ಪತ್ನಿ ಒಪ್ಪಿರಲಿಲ್ಲ ಹಾಗೂ ಮಕ್ಕಳೊಂದಿಗೂ ಸಂಪರ್ಕ ಮಾಡದಂತೆ ತಡೆಯೊಡ್ಡಲಾಗಿತ್ತು.

ADVERTISEMENT

ಕೋಪಗೊಂಡ ಸುರೇಶ 2022ರ ಜ.20 ರಂದು ಶಾಲಿನಿ ಅವರು ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಬರುತ್ತಿರುವ ದಾರಿಯಲ್ಲಿ ಗಲಾಟೆ ಮಾಡಿ ಕೊಡಲಿಯಿಂದ ಹಲ್ಲೆ ಮಾಡಿ, ಶಿರಚ್ಛೇದನ ಮಾಡಿದ್ದನು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ದಾಖಲಲಾಗಿತ್ತು.

ನಂತರ ಪೊಲೀಸರು ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸೈಯದ್ ಉನ್ನಿಸಾ ಅವರು ಸುರೇಶ್‌ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ, ಐದು ವರ್ಷ ಸೆರೆಮನೆ ವಾಸದ ತೀರ್ಪು ನೀಡಿದ್ದಾರೆ.

ಜೊತೆಗೆ ಮೃತಳ ಇಬ್ಬರು ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡಲು ನಿರ್ದೇಶಿಸಲಾಗಿದೆ. ಆರೋಪಿ ವಿರುದ್ಧ ಸರ್ಕಾರಿ ಅಭಿಯೋಜಕರಾದ ಎನ್.ಬಿ.ವಿಜಯಲಕ್ಷ್ಮಿ, ಕೆ.ನಾಗರಾಜ ವಾದ ಮಂಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.