ಮಂಡ್ಯ: ‘ಮೃತದೇಹ ಮನೆಗೆ ಬರುವವರೆಗೂ ಗಂಡ ಕೊಲೆಯಾಗಿರುವ ವಿಷಯವನ್ನು ಯಾರೂ ತಿಳಿಸಿರಲಿಲ್ಲ. ಗಾಯದ ಗುರುತು ನೋಡಿ ಕೊಲೆಯಾಗಿರುವ ವಿಷಯ ತಿಳಿಯಿತು. ಸ್ನಾನ ಮಾಡಿಸುವಾಗ ಚರ್ಮ ಕಿತ್ತು ಬರುತ್ತಿತ್ತು. ಗಂಡನನ್ನು ಚಿತ್ರಹಿಂಸೆ ಮಾಡಿ ಕೊಂದಿದ್ದಾರೆ. ವಿದ್ಯುತ್ ಶಾಕ್ ಕೊಟ್ಟಿದ್ದಾರೆ, ಚುಚ್ಚಿಚುಚ್ಚಿ ಕೊಂದಿದ್ದಾರೆ. ಅನಾಥವಾದ ನನ್ನ ಸಣ್ಣ ಮಕ್ಕಳಿಗೆ ಇನ್ನು ಯಾರು ಗತಿ’
ರಾಮನಗರ ಜಿಲ್ಲೆ, ಸಾತನೂರು ಬಳಿ ಕೊಲೆಯಾದ ಇದ್ರೀಷ್ ಪಾಷ ಅವರ ಪತ್ನಿ ಫಾತಿಮಾ ಬಾನು ಹೀಗೆ ಪ್ರಶ್ನಿಸುತ್ತಾ ಕಣ್ಣೀರಿಟ್ಟರು.
ನಗರದ ಗುತ್ತಲು ಬಡಾವಣೆಯ ಸಫ್ತಾರಿಯಾಬಾದ್‌ನಲ್ಲಿರುವ ಇದ್ರೀಷ್ ಪಾಷ ಕುಟುಂಬದ ಸದಸ್ಯರು ದುಃಖದ ಮಡುವಿನಲ್ಲಿದ್ದಾರೆ. ಸಂಬಂಧಿಕರು, ವಿವಿಧ ಸಂಘಟನೆಗಳ ಮುಖಂಡರು ಬಂದು ಸಂತೈಸುತ್ತಿದ್ದಾರೆ.
ಇದ್ರೀಷ್ ಪಾಷ ಅವರಿಗೆ ಇಬ್ಬರು ಪತ್ನಿಯರು, ಇಬ್ಬರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪತ್ನಿ ಫಾತಿಮಾ ಭಾನು ಅವರಿಗೆ 2 ವರ್ಷದ ಹೆಣ್ಣು ಮಗು, 3 ತಿಂಗಳ ಗಂಡು ಮಗುವಿದೆ. ‘ಮಕ್ಕಳಿಗಾಗಿ ಹಗಲಿರುಳೆನ್ನದೇ ಕೂಲಿ ಮಾಡುತ್ತಿದ್ದ ಗಂಡನನ್ನು ಹೊಡೆದು ಕೊಂದಿದ್ದಾರೆ. 3 ತಿಂಗಳ ಮಗು ಅಪ್ಪನ ಮುಖವನ್ನೇ ಸರಿಯಾಗಿ ನೋಡಿರಲಿಲ್ಲ. ಗಂಡನ ಸಾವಿಗೆ ನ್ಯಾಯ ಕೊಡಿಸಿ’ ಎಂದು ಕೇಳಿದರು.
ಇದ್ರೀಷ್ ಪಾಷ ಚಾಲಕನಾಗಿದ್ದು, ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಸಂತೆಯಲ್ಲಿ ರೈತರಿಂದ ಖರೀದಿಸಿದ್ದ ಜಾನುವಾರುಗಳನ್ನು ರಾಮನಗರ ಬಳಿಯ ಇನ್ನೊಂದು ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದರು. ‘ಸಂತೆಯಲ್ಲಿ ಸುಂಕ ಕಟ್ಟಿದ್ದ ರಸೀದಿ, ಸಾಗಣೆಗೆ ಬೇಕಾದ ದಾಖಲಾತಿಗಳಿದ್ದವು. ಚಾಲಕನನ್ನೇ ಅಕ್ರಮ ಜಾನುವಾರು ಸಾಗಣೆದಾರ ಎಂದು ತಿಳಿದು ಕೊಲ್ಲಲಾಗಿದೆ’ ಎಂದು ಕುಟುಂಬದ ಸದಸ್ಯರು ಆರೋಪಿಸಿ, ರಸೀದಿಗಳನ್ನು ತೋರಿಸಿದರು.
‘ಸಾತನೂರು ಪೊಲೀಸ್ ಠಾಣೆಯ ಮುಂದೆಯೇ ವಾಹನ ತಡೆಯಲಾಗಿದೆ. ಪ್ರಮುಖ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಈ ಕುರಿತು ವಿಡಿಯೊ ಹಾಕಿದ್ದಾನೆ. ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದರೆ ಪೊಲೀಸರಿಗೆ ಹಿಡಿದು ಕೊಡದೆ ಅಮಾಯಕ ಚಾಲಕನನ್ನು ಏಕೆ ಕೊಂದರು? ಈಗ ಎರಡು ಕುಟುಂಬಗಳಿಗೆ ಗತಿ ಯಾರು’ ಎಂದು ಇದ್ರೀಷ್ ಸಹೋದರ ಯೂನುಸ್ ಪಾಷ ಪ್ರಶ್ನಿಸಿದರು.
ಆಕ್ರೋಶ: ‘ಕೊಲೆಯಾಗಿ ನಾಲ್ಕು ದಿನಗಳಾಗಿದ್ದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ರಾಮನಗರ, ಮಂಡ್ಯ ಪೊಲೀಸರು ಇದ್ರೀಷ್ ಮನೆಗೆ ಭೇಟಿ ನೀಡಿಲ್ಲ’ ಎಂದು ಅವರ ಕುಟಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಕೊಲೆಯಾದವರು ಹಿಂದೂವಾಗಿದ್ದಿದ್ದರೆ ಮುಖ್ಯಮಂತ್ರಿಯೇ ಬರುತ್ತಿದ್ದರು. ರಾಜಕಾರಣಿಗಳು, ಅಧಿಕಾರಿಗಳ ದಂಡೇ ಬರುತ್ತಿತ್ತು. ಆದರೆ ನಮ್ಮ ಮನೆಗೆ ಯಾರೂ ಬಂದಿಲ್ಲ, ಮುಸ್ಲಿಮರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ’ ಎಂದು ಸಂಬಂಧಿ ತಬ್ರೀಸ್ ಖಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.