ADVERTISEMENT

ನನ್ನ ಸರ್ಕಾರ ಇದ್ದಿದ್ದರೆ ₹10 ಸಾವಿರ ಪರಿಹಾರ: ಎಚ್.ಡಿ. ಕುಮಾರಸ್ವಾಮಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:50 IST
Last Updated 18 ಜೂನ್ 2021, 4:50 IST
ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ಯೋಧರಿಗೆ ಆಹಾರ ಕಿಟ್‌ಗಳನ್ನು ಎಚ್.ಡಿ.ಕುಮಾರಸ್ವಾಮಿ ವಿತರಿಸಿದರು
ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ಯೋಧರಿಗೆ ಆಹಾರ ಕಿಟ್‌ಗಳನ್ನು ಎಚ್.ಡಿ.ಕುಮಾರಸ್ವಾಮಿ ವಿತರಿಸಿದರು   

ಕೆ.ಆರ್.ಪೇಟೆ: ‘ನಾನು ಅಧಿಕಾರದಲ್ಲಿ ಇದ್ದಿದ್ದರೆ ರಾಜ್ಯದ ಐದು ಕೋಟಿ ಬಡ ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ನೀಡುತ್ತಿದ್ದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷ ಮತ್ತು ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು ಅಭಿಮಾನಿ ಬಳಗದ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

‘ರೈತರು ಸೇರಿದಂತೆ ಎಲ್ಲ ವರ್ಗದವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿದ್ದೆ. ಆದರೆ, ನನ್ನನ್ನು ಅಧಿಕಾರದಲ್ಲಿಡಲು ಬಿಡಲಿಲ್ಲ. ಮುಂದೆ ಸ್ವಂತ ಬಲದ ಆಧಾರದ ಮೇಲೆ ಅಧಿಕಾರಕ್ಕೆ ಬಂದರೆ ಹಸಿವುಮುಕ್ತ, ಸಾಲಮುಕ್ತ, ನಿರುದ್ಯೋಗಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಪಂಚರತ್ನ ಸೂತ್ರಗಳನ್ನು ಜಾರಿ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

ಸಾವಿರಾರು ಮಂದಿ ಸಾವಿಗೆ ಬಿಜೆಪಿ ಸರ್ಕಾರವೇ ಹೊಣೆ. ಬಿಜೆಪಿಯವರ ಅಧಿಕಾರದ ಮದ ಮತ್ತು ಅಹಂಕಾರ ದಿಂದಾಗಿ ಜನರು ಬೀದಿ ಯಲ್ಲಿ ಸಾಯುವಂತಾಗಿದೆ. ಆದರೆ, ಇವತ್ತಿಗೂ ಬಿಜೆಪಿ ನಾಯಕರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಜನ ಕೋವಿಡ್‌ನಿಂದ ಒದ್ದಾಡುತಿದ್ದರೆ ಮುಖ್ಯಮಂತ್ರಿ ಗಾದಿಗಾಗಿ ಮಂತ್ರಿಗಳು, ಶಾಸಕರು ಪೈಪೋಟಿ ನಡೆಸುತಿದ್ದಾರೆ. ಈ ಹೈಕಮಾಂಡ್ ಸಂಸ್ಕೃತಿಯಿಂದ, ಉಸ್ತುವಾರಿಗಳು ಬರುವುದರಿಂದ ರಾಜ್ಯಕ್ಕೆ ಯಾವ ಪ್ರಯೋಜನವೂ ಇಲ್ಲ. ಬದಲಿಗೆ ರಾಜ್ಯದ ಬೊಕ್ಕಸ ಖಾಲಿಯಾಗುತ್ತದಷ್ಟೆ ಎಂದು ಕಿಡಿಕಾರಿದರು.

ಜೆಡಿಎಸ್‌ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಬಡವರಿಗೆ, ಸಂಕಷ್ಟದಲ್ಲಿ ರುವವರಿಗೆ ಪಕ್ಷವು ನೆರವಾಗುತ್ತಿದೆ. ಜಿಲ್ಲೆಯ ಜನರ ನೋವಿಗೆ ಧ್ವನಿಯಾಗಿ ಪಕ್ಷ ಕಾರ್ಯ ನಿರ್ವಹಿಸಬೇಕು’ ಎಂದರು.

ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ, ಮನ್‌ಮುಲ್ ನಿರ್ದೇಶಕ ರಾಮಚಂದ್ರು ನಲ್ಲಿಗೆರೆ ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಶೀಳನೆರೆ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಸಿದ್ದೇಶ್, ಬಲ್ಲೇನಹಳ್ಳಿ ನಂದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.