ADVERTISEMENT

ಮಂಡ್ಯ: ವನ್ಯಜೀವಿ ದಾಳಿಗೆ 1,336 ಜಾನುವಾರು ಸಾವು

ಅರಣ್ಯ ಇಲಾಖೆಯಿಂದ ₹1.01 ಕೋಟಿ ಪರಿಹಾರ; ಕಬ್ಬಿನ ಗದ್ದೆಗಳೇ ಚಿರತೆಯ ವಾಸಸ್ಥಾನ

ಸಿದ್ದು ಆರ್.ಜಿ.ಹಳ್ಳಿ
Published 18 ಏಪ್ರಿಲ್ 2025, 4:08 IST
Last Updated 18 ಏಪ್ರಿಲ್ 2025, 4:08 IST
<div class="paragraphs"><p>ಚಿರತೆ</p></div>

ಚಿರತೆ

   

ಮಂಡ್ಯ: ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಜನರನ್ನು ಭಯಭೀತಗೊಳಿಸಿವೆ. ಕಳೆದ 3 ವರ್ಷಗಳಲ್ಲಿ ವನ್ಯಜೀವಿ ದಾಳಿಯಿಂದ 1,336 ಜಾನುವಾರು ಬಲಿಯಾಗಿವೆ.

2022–23ನೇ ಸಾಲಿನಲ್ಲಿ 595, 2023–24ನೇ ಸಾಲಿನಲ್ಲಿ 153 ಹಾಗೂ 2024–25ನೇ ಸಾಲಿನಲ್ಲಿ 588 ಪ್ರಕರಣಗಳು ದಾಖಲಾಗಿವೆ. ವನ್ಯಜೀವಿ ದಾಳಿಯಿಂದ ಹಸು ಮೃತಪಟ್ಟರೆ ₹30 ಸಾವಿರ, ಕರು ಮೃತಪಟ್ಟರೆ ₹10 ಸಾವಿರ, ಕುರಿ ಹಾಗೂ ಮೇಕೆಗಳು ಬಲಿಯಾದರೆ ತಲಾ ₹4 ಸಾವಿರ ಪರಿಹಾರ ನೀಡಲಾಗುತ್ತಿದೆ. ಒಟ್ಟು 1336 ಪ್ರಕರಣಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಬರೋಬ್ಬರಿ ₹1.01 ಕೋಟಿ ಪರಿಹಾರ ನೀಡಲಾಗಿದೆ. 

ADVERTISEMENT

ಇದೇ ವರ್ಷ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಮಾದಹಳ್ಳಿ ಗ್ರಾಮದ ಹೊರವಲಯದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೇಕೆಗಳ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿ ಎರಡು ಮೇಕೆಗಳನ್ನು ಕೊಂದು ಹಾಕಿತ್ತು. ನಾಗಮಂಗಲ ತಾಲ್ಲೂಕಿನ ತ್ಯಾಪೇನಹಳ್ಳಿಯಲ್ಲಿ ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು. ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿ ಗ್ರಾಮದ ಬಳಿಯ ತೋಟದ ಮನೆಗೆ ತಡರಾತ್ರಿ ದಾಳಿ ನಡೆಸಿದ ಚಿರತೆ 20ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ತಿಂದು, ಕೆಲವು ಕೋಳಿಗಳನ್ನು ಹೊತ್ತೊಯ್ದಿತ್ತು. 

ಕಳೆದ ಎರಡು ವರ್ಷದ ಹಿಂದೆ ವಿಶ್ವವಿಖ್ಯಾತ ಕೆ.ಆರ್.ಎಸ್ ಆಣೆಕಟ್ಟೆ ಬಳಿ ಚಿರತೆಯೊಂದು ಪ್ರತ್ಯಕ್ಷಗೊಂಡಿದ್ದು, ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿತ್ತು. ಇದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಕೆಲ ದಿನ ಬೃಂದಾವನದ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. 

ಕಬ್ಬಿನ ಗದ್ದೆಗಳೇ ವಾಸಸ್ಥಾನ: 

‘ಬೆಟ್ಟ, ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಚಿರತೆಗಳು ಇತ್ತೀಚಿನ ದಿನಗಳಲ್ಲಿ ಕಬ್ಬಿನ ಗದ್ದೆಗಳನ್ನೇ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಇಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತಿರುವುದರಿಂದ ಚಿರತೆಗಳ ಸಂಖ್ಯೆ ಜನವಸತಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಜೊತೆಗೆ ಮಾನವ–ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗುತ್ತಿದೆ’ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು. 

ಚಿರತೆ ಹಾವಳಿಯಿಂದ ಬೆಚ್ಚಿ ಬಿದ್ದಿರುವ ರೈತರು, ರಾತ್ರಿ ವೇಳೆ ಹೊಲ, ಗದ್ದೆಗಳಿಗೆ ನೀರು ಹಾಯಿಸುವುದಕ್ಕೆ ಹೋಗಲು ಹೆದರುತ್ತಿದ್ದಾರೆ. ಕಬ್ಬಿನ ಗದ್ದೆಗಳಲ್ಲೇ ಚಿರತೆಗಳು ಮರಿ ಹಾಕಿರುವ ಹಲವಾರು ಉದಾಹರಣೆಗಳಿವೆ. ಹಸು, ಮೇಕೆ, ನಾಯಿಗಳೇ ಚಿರತೆಗಳ ಟಾರ್ಗೆಟ್. ಜಿಲ್ಲೆಯಲ್ಲಿ ರೈತರು ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ರೈತರಿಗೆ ಆಧಾರ ಸ್ತಂಭವಾಗಿರುವ ಸಾಕು ಪ್ರಾಣಿಗಳನ್ನು ಚಿರತೆಗಳು ಬಲಿ ಪಡೆಯುತ್ತಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. 

ಪ್ರಸ್ತುತ ಚಿರತೆಗಳ ಆಹಾರಗಳು ಬದಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಬಿಸಾಡುವ ಕೋಳಿ ತ್ಯಾಜ್ಯವನ್ನು ಹುಡುಕಿಕೊಂಡು ಬರುತ್ತಿವೆ. ಜತೆಗೆ ನಗರಗಳಲ್ಲಿ ಬಿಸಾಡುವ ತ್ಯಾಜ್ಯಗಳಿಂದಾಗಿ ನಾಯಿಗಳು ಅವುಗಳನ್ನು ತಿನ್ನಲು ಬರುತ್ತಿವೆ. ನಾಯಿಗಳನ್ನು ಬೇಟೆಯಾಡಲು ಚಿರತೆಗಳು ಹೆಚ್ಚಾಗಿ ಪಟ್ಟಣಗಳತ್ತ ಬರಲು ಕಾರಣ ಎನ್ನುತ್ತಾರೆ ವನ್ಯಜೀವಿ ತಜ್ಞರು. 

37 ಚಿರತೆಗಳ ಸೆರೆ: 

‘ಕಳೆದ 3 ವರ್ಷಗಳಲ್ಲಿ ಚಿರತೆಗಳ ಚಲನವಲನ ಕಂಡು ಬಂದ ಸ್ಥಳಗಳಲ್ಲಿ ಬೋನು ಇಟ್ಟು 37 ಚಿರತೆಗಳನ್ನು ಸೆರೆ ಹಿಡಿದಿದ್ದೇವೆ. ಹಿಡಿದ ಚಿರತೆಗಳನ್ನು ಭದ್ರಾ ಅರಣ್ಯ, ಕಾವೇರಿ ವನ್ಯಜೀವಿಧಾಮ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಿಗೆ ಬಿಡುತ್ತಿದ್ದೇವೆ. ಚಿರತೆ ಹೆಜ್ಜೆ ಗುರುತು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ರೈತರಿಗೆ ಸೂಚಿಸಿದ್ದೇವೆ’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿಗಳು. 

ಚಿರತೆ 
ಮಾನವ–ವನ್ಯಜೀವಿ ಸಂಘರ್ಷ ಪ್ರಕರಣ ತಡೆಗಟ್ಟಲು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಪ್ರದೇಶದ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿದ್ದೇವೆ. ಅರಣ್ಯ ರಕ್ಷಣೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ
– ಬಿ.ಮಹಾದೇವಸ್ವಾಮಿ ಎಸಿಎಫ್‌ ಮಂಡ್ಯ ಉಪವಿಭಾಗ
ಚಿರತೆ ದಾಳಿಯಿಂದ ಸಾಕುಪ್ರಾಣಿ ಕಳೆದುಕೊಂಡ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ವಿಶೇಷ ಕಾರ್ಯಾಚರಣೆ ನಡೆಸಬೇಕು
– ಶಿವರಾಜು ರೈತ ಮುಖಂಡ ಬಾಳೆಹೊನ್ನಿಗ ಗ್ರಾಮ

ವನ್ಯಜೀವಿ ದಾಳಿ ಪ್ರಕರಣಗಳ ವಿವರ (2022–23ರಿಂದ 2024–25ರವರೆಗೆ)

ವಲಯ; ಜಾನುವಾರು ಸಾವು; ಪರಿಹಾರ (₹ಲಕ್ಷಗಳಲ್ಲಿ)

ನಾಗಮಂಗಲ;460;31.12 ‌

ಮದ್ದೂರು;327;22.66

ಮಳವಳ್ಳಿ;187;15.22

ಪಾಂಡವಪುರ;150;10.45

ಕೆ.ಆರ್‌.ಪೇಟೆ;113;13.42

ಮಂಡ್ಯ;85;7.15

ಶ್ರೀರಂಗಪಟ್ಟಣ;14;1.20

ಒಟ್ಟು;1336;10122000

ಆನೆ ದಾಳಿಗೆ ಮಹಿಳೆ ಬಲಿ
2023ರ ನವೆಂಬರ್‌ನಲ್ಲಿ ಮಂಡ್ಯ ತಾಲ್ಲೂಕಿನ ಲಾಳನಕೆರೆ ಗ್ರಾಮದ ಸಮೀಪ ಜಮೀನಿನಲ್ಲಿ ಕೂಲಿ ಕೆಲಸ ಮಾಡುವ ಸಮಯದಲ್ಲಿ ಹಠಾತ್ತನೆ ಆನೆಯೊಂದು ನಡೆಸಿದ ದಾಳಿಯಲ್ಲಿ ಕೂಲಿ ಕಾರ್ಮಿಕ ಮಹಿಳೆ ಸಾಕಮ್ಮ (50) ಮೃತಪಟ್ಟಿದ್ದರು. ಆನೆಗಳ ದಾಳಿ ಹೆಚ್ಚಾಗಿ ಮಳವಳ್ಳಿ ಮದ್ದೂರು ಮತ್ತು ಮಂಡ್ಯ ವಲಯಗಳಲ್ಲಿ ಇದುವರೆಗೆ ಕಂಡುಬಂದಿದೆ.  ಕಳೆದ ವರ್ಷ ಎರಡು ಆನೆಗಳು ಮದ್ದೂರು ಮಂಡ್ಯ ತಾಲ್ಲೂಕಿನಲ್ಲೇ ಅಡ್ಡಾಡಿ ಭಾರತೀನಗರ ಸಮೀಪದ ಗುಡಿಗೆರೆ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಬೀಡು ಬಿಟ್ಟಿದ್ದವು. ಭತ್ತ ಮತ್ತು ಕಬ್ಬಿನ ಬೆಳೆಗಳನ್ನು ನಾಶ ಮಾಡಿ ರೈತರಿಗೆ ನಷ್ಟ ಉಂಟು ಮಾಡಿದ್ದವು.  ಕಾಡು ಹಂದಿ ದಾಳಿಗೆ ಇಬ್ಬರಿಗೆ ಗಾಯ ಇದೇ ಏಪ್ರಿಲ್‌ 6ರಂದು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಸಮೀಪದ ಕಿರಗಸೂರು ಗ್ರಾಮಕ್ಕೆ ಏಕಾಏಕಿಯಾಗಿ ನುಗ್ಗಿದ ಕಾಡುಹಂದಿ ಇಬ್ಬರು ವ್ಯಕ್ತಿಗಳು ಸೇರಿದಂತೆ ಹಸುವಿನ ಮೇಲೆ ದಾಳಿ ಮಾಡಿ ಕೋರೆಯಿಂದ ತಿವಿದು ಗಾಯಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.