ADVERTISEMENT

ಮನೆ ಹಂಚಿಕೆಯಲ್ಲಿ ಅನ್ಯಾಯ: ಶಾಸಕ ಆಕ್ರೋಶ

ನಿಜವಾದ ಫಲಾನುಭವಿ ಗುರುತಿಸಲು ಪಿಡಿಒಗಳು ವಿಫಲ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:46 IST
Last Updated 24 ಫೆಬ್ರುವರಿ 2021, 3:46 IST
ನಾಗಮಂಗಲ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಸುರೇಶ್ ಗೌಡ ಪಿಡಿಒಗಳಿಂದ ಮಾಹಿತಿ ‌ಪಡೆದರು.
ನಾಗಮಂಗಲ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಸುರೇಶ್ ಗೌಡ ಪಿಡಿಒಗಳಿಂದ ಮಾಹಿತಿ ‌ಪಡೆದರು.   

ನಾಗಮಂಗಲ: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಜವಾದ ಬಡವರು, ಅಗತ್ಯ ಇರುವ ಫಲಾನುಭವಿಗಳಿಗೆ ಮನೆಗಳನ್ನು ನೀಡದೇ ಈಗಾಗಲೇ ಮನೆ ಇದ್ದವರಿಗೆ ಸವಲತ್ತು ನೀಡಿದ್ದನ್ನು ನೋಡಿದರೆ ನಿಜವಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಪಿಡಿಒ‌ಗಳು ವಿಫಲರಾಗಿದ್ದಾರೆ’ ಎಂದು ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ದೇವಲಾಪುರ, ಬೆಳ್ಳೂರು ಮತ್ತು ಬಿಂಡಿಗನವಿಲೆ ಗ್ರಾ.ಪಂ ಪಿಡಿಒ ಮತ್ತು ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಪ್ರಥಮ ಬಾರಿಗೆ ಶಾಸಕನಾದಾಗ ತಾಲ್ಲೂಕಿನಲ್ಲಿ ಸಮೀಕ್ಷೆ ಮಾಡಿಸಿದ್ದೆ. ಅಲ್ಲಿ 4,500 ಮನೆಗಳು ಬಂದರೆ ತಾಲ್ಲೂಕನ್ನು ಗುಡಿಸಲು ಮುಕ್ತ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇಲ್ಲಿಯವರೆಗೆ ಒಟ್ಟು 15 ಸಾವಿರ ಮನೆಗಳನ್ನು ಮಂಜೂರಾಗಿವೆ. ಆದರೂ ಸಹ ಇನ್ನೂ ಮನೆಯ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು ನೀವೆ ಹೇಳಿ? ಅಲ್ಲದೇ ಪಿಡಿಒಗಳು ಗ್ರಾಮಗಳಲ್ಲಿ ಉಳ್ಳವರಿಗೆ ಅವಕಾಶ ಮಾಡಿಕೊಡುತ್ತಿರುವುದನ್ನು ಮೊದಲು ನಿಲ್ಲಿಸಿ ಬಡವರನ್ನು ಗುರುತಿಸಿ ನೆರವು ನೀಡಿ’ ಎಂದು ಸೂಚಿಸಿದರು.

‘ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲು ನಾವು ಸಿದ್ಧರಿಲ್ಲ. ಯಾವುದೇ ಪಕ್ಷದವರು ಮುಂದೆ ಬಂದು ‌ಕೆಲಸ ಮಾಡಿದರೂ ಅವಕಾಶ ನೀಡಿ. ಅದಕ್ಕೆ ನಮ್ಮ ಅಡ್ಡಿಯಿಲ್ಲ, ಕೇವಲ ಗ್ರಾಮಗಳ ಅಭಿವೃದ್ಧಿ ಮಾತ್ರವೇ ಮುಖ್ಯವಾಗಿರಬೇಕು’ ಎಂದರು.

ADVERTISEMENT

‘14 ಮತ್ತು 15 ನೇ ಹಣಕಾಸಿನ ಆಯವ್ಯಯ ಕುರಿತಂತೆ ಪಿಡಿಒಗಳಿಂದ ಮಾಹಿತಿ ಪಡೆದರು. ಮಾಹಿತಿ ನೀಡಲು ತಡವರಿಸಿದ ಪಿಡಿಒಗಳಿಗೆ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕ್ರಿಯಾಯೋಜನೆ ಮತ್ತು‌ ಅಗತ್ಯ ಮಾಹಿತಿ ತರದೇ ಸಭೆಗೆ ಬಂದರೆ ಮುಂದಿನ‌ ದಿನಗಳಲ್ಲಿ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ. ಮಾಹಿತಿ ತರದವರು ಸಭೆಯ ಬರುವುದು ಬೇಡ’ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಾಟಾಚಾರಕ್ಕೆಗ್ರಾಮ ಸಭೆ: ಎಚ್ಚರಿಕೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏನೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದರೆ ಅದು ಗ್ರಾಮ ಸಭೆಗೆ ಹೆಚ್ಚಿನ ಅಧಿಕಾರವಿದ್ದು, ಅಲ್ಲಿ ಚರ್ಚೆ ಮಾಡಿದ ನಂತರ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರ ಮುಂದೆಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಅಧಿಕಾರಿಗಳು ಗ್ರಾಮ ಸಭೆಗೆ ಇರುವ ಅಧಿಕಾರವನ್ನು ಜನರಿಗೆ ಸರಿಯಾಗಿ ತಿಳಿಸದೇ ಕಾಟಾಚಾರಕ್ಕೆ ಸಭೆಯನ್ನು ನಡೆಸಿ ಕಚೇರಿಯಲ್ಲಿ ತಮ್ಮ ಇಷ್ಟ ಬಂದಂತೆ ಸದಸ್ಯರೊಂದಿಗೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೀರಾ. ಆದರೆ, ಗ್ರಾಮ ಸಭೆಗೆ ಅತ್ಯಂತ ಹೆಚ್ಚಿನ ಪರಮಾಧಿಕಾರ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.

ಮನಸ್ಸಿಲ್ಲವೆಂದರೆ ತಾಲ್ಲೂಕಿನಿಂದ ಹೊರಡಿ: ‘ಪಿಡಿಒಗಳು, ಇತರೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುವುದಾದರೆ ಮಾತ್ರವೇ ನಮ್ಮ ತಾಲ್ಲೂಕಿನಲ್ಲಿ ಉಳಿದುಕೊಳ್ಳಿ, ಬೇಕಾಬಿಟ್ಟಿ ವರ್ತಿಸುವುದಾದರೆ ದಯಮಾಡಿ ತಾಲ್ಲೂಕಿನಿಂದ ಬೇರೆಡೆಗೆ ಹೋಗಿ. ಯಾರು ಉತ್ತಮ ಕೆಲಸ ಮಾಡುತ್ತಾರೆಯೋ ಅಷ್ಟೇ ಜನ ಇದ್ದರೆ ಸಾಕು ನಮಗೆ’ ಎಂದು ಅಧಿಕಾರಿಗಳ ವಿರುದ್ಧಸುರೇಶ್‌ ಗೌಡ ಹರಿಹಾಯ್ದರು.

ಜಿ.ಪಂ. ಸದಸ್ಯ ಮುತ್ತಣ್ಣ, ಇಒ ಸತೀಶ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಅರ್ಚನ ಮತ್ತು ವಿವಿಧ ಗ್ರಾ.ಪಂಗಳ ಪಿಡಿಒ ಮತ್ತು ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.