ಭಾರತೀನಗರ: ಕೇಂದ್ರ, ರಾಜ್ಯ ಸರ್ಕಾರಗಳೆರಡೂ ರೈತರನ್ನು ಬಹಳ ಕಾಲದಿಂದಲೂ ಶೋಷಿಸಿ, ಅನ್ಯಾಯ ಮಾಡುತ್ತಾ ಬಂದಿವೆ ಎಂದು ರೈತ ಮುಖಂಡ ಸೋ.ಶಿ.ಪ್ರಕಾಶ್ ಆರೋಪಿಸಿದರು.
ಇಲ್ಲಿಯ ಹಲಗೂರು ವೃತ್ತದ ಬಳಿ ರೈತ ಸಂಘದ ಚಿಕ್ಕಅರಸಿನಕೆರೆ ಹೋಬಳಿ ಘಟಕದ ವತಿಯಿಂದ ನಡೆದ 46ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ರೈತ ಚಳವಳಿಗಳು ಗಟ್ಟಿತನದಿಂದ ನಡೆಯುತ್ತಿರಲಿಲ್ಲ. 1980ರಲ್ಲಿ ನರಗುಂದ, ನವಲಗುಂದದಲ್ಲಿ ರೈತರ ಮೇಲೆ ನಡೆದ ಶೋಷಣೆಯ ನಂತರ ರೈತ ಚಳವಳಿಗಳು ವಿಶಿಷ್ಟವಾದ ಸ್ವರೂಪ ಪಡೆದುಕೊಂಡು ರೈತರನ್ನು ಒಗ್ಗೂಡಿಸಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದವು. ಅಂದಿನಿಂದ ಇಂದಿನವರೆಗೂ ರೈತರ ಮೇಲಿನ ಶೋಷಣೆಯೂ ನಿಂತಿಲ್ಲ, ರೈತರ ಹೋರಾಟಗಳು ನಿಂತಿಲ್ಲ’ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಬಿ.ಎಸ್. ಬೋರೇಗೌಡ ಮಾತನಾಡಿ, ‘ರೈತರನ್ನು ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ವಿಪಕ್ಷದಲ್ಲಿದ್ದಾಗ ಆಡುವ ರೈತಪರವಾದ ಮಾತುಗಳೇ ಬೇರೆ, ಆಡಳಿತ ಚುಕ್ಕಾಣಿ ಹಿಡಿದ ನಂತರ ನಡೆದುಕೊಳ್ಳುವ ರೀತಿಯೇ ಬೇರೆ. ಇದು ನಿಂತಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಕೀಳಘಟ್ಟದ ನಂಜುಂಡ, ಅಣ್ಣೂರು ಮಹೇಂದ್ರ, ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ, ಶಿವಹಳ್ಳಿ ಚಂದ್ರು, ತಾಲ್ಲೂಕು ಅಧ್ಯಕ್ಷ ಪ್ರಭುಲಿಂಗು, ಬೊಪ್ಪಸಮುದ್ರ ಮಲ್ಲೇಶ್, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಬಿ.ಎಸ್.ಬೋರೇಗೌಡ, ಕರಡಕೆರೆ ಯೋಗೇಶ್, ಕುದರಗುಂಡಿ ನಾಗರಾಜು, ಕೊಪ್ಪ ಉಮೇಶ್, ಬನ್ನೂರು ನಾರಾಯಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.