ADVERTISEMENT

3 ವರ್ಷಗಳಲ್ಲಿ ನೀರಾವರಿ ಯೋಜನೆಗಳು ಪೂರ್ಣ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 21:13 IST
Last Updated 26 ಆಗಸ್ಟ್ 2020, 21:13 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಸಭೆಯ ಬಳಿಕ ಅವರು ಮಾತನಾಡಿದರು.

ಯೋಜನೆಗಳಿಗೆ ಅಡ್ಡಿಯಾಗಿರುವ ಭೂಸ್ವಾಧೀನದ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ‘ಕುಡಿಯುವ ಮತ್ತು ನೀರಾವರಿ ಯೋಜನೆಗಳು ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಈ ಸಂಬಂಧ ತುಮಕೂರು ಮತ್ತು ರಾಮನಗರ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಬೇಕು’ ಎಂದು ತಿಳಿಸಿದರು.

ADVERTISEMENT

‍‘ಮಾಗಡಿ ತಾಲ್ಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಶ್ರೀರಂಗ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು. ಭೂಸ್ವಾಧೀನ ಪ್ರಕ್ರಿಯೆಗೆ ಎದುರಾಗಿರುವ ತೊಡಕುಗಳ ಬಗ್ಗೆ ವಾರದೊಳಗೆ ಕಂದಾಯ ಇಲಾಖೆ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು’ ಎಂದುಮುಖ್ಯ ಎಂಜಿನಿಯರ್‌ ಬಾಲಕೃಷ್ಣ ಅವರಿಗೆ ಸೂಚಿಸಿದರು.

ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲ್ಲೂಕಿನ ಗರಳಾಪುರ ಮತ್ತಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ ನೀರು ತುಂಬಿಸಲು ₹ 70 ಕೋಟಿ ವೆಚ್ಚ ಮಾಡುತ್ತಿದ್ದು, ಭೂಸ್ವಾಧೀನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಅವರು ಸಭೆಯಲ್ಲಿ ತಿಳಿಸಿದರು.

ಮೊಗೇನಹಳ್ಳಿ ಕೆರೆ ಮತ್ತು ಕಣ್ವ ಜಲಾಶಯಕ್ಕೆ ನೀರುವ ತುಂಬಿಸುವ ₹ 540 ಕೋಟಿ ವೆಚ್ಚದ ಸತ್ತೇಗಾಲ ಯೋಜನೆ ಪ್ರಗತಿಯಲ್ಲಿದೆ. ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ. ಗುಡ್ಡ ಕೆರೆಗೆ ನೀರು ತಂದು ನಾಲ್ಕು ತಾಲ್ಲೂಕುಗಳಿಗೆ ಒದಗಿಸಲು ಉದ್ದೇಶಿಸಿರುವ ಈ ಯೋಜನೆಯ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗರಕಹಳ್ಳಿ ಏತ ಯೋಜನೆ, ಸಾತನೂರು ಕೆರೆ ತುಂಬಿಸುವ ಯೋಜನೆ, ನಾರಾಯಣಪುರ ಕೆರೆ ತುಂಬಿಸುವ ಯೋಜನೆ, ಕೆಂಗೇರಿ ದೊಡ್ಡಬೆಲೆ ಏತ ಯೋಜನೆ, ಬೈರಮಂಗಲ ತಿರುವು ನಾಲಾ ಯೋಜನೆ, ಕಣ್ವ ನಾಲೆಗಳ ಆಧುನೀಕರಣ ಯೋಜನೆ, ಅರೆಕೊಪ್ಪ ಸೂಕ್ಷ್ಮ ನೀರಾವರಿ, ಹೆಗ್ಗನೂರು ಸೂಕ್ಷ್ಮ ನೀರಾವರಿ, ದೊಡ್ಡಾಲಹಳ್ಳಿ ಹನಿ ನೀರಾವರಿ ಯೋಜನೆಗಳ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.