ಮಂಡ್ಯ: ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳ ಫಲವಾಗಿ ಕೃಷಿ, ಮೀನುಗಾರಿಕೆ, ರಕ್ಷಣೆ ಹಾಗೂ ಹವಾಮಾನ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಿವೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಬಿಇ ಮತ್ತು ಬಿಸಿಎ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಕ್ರಂ ಸಾರಾಭಾಯಿ ಅವರು ಅಮೆರಿಕದ ಉಪಗ್ರಹವನ್ನು ಉಪಯೋಗಿಸಿಕೊಂಡು ಬಾಹ್ಯಾಕಾಶ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಭಾರತದ 250 ಹಳ್ಳಿಗಳಿಗೆ ಪ್ರಸಾರ ಮಾಡಲು ಸಫಲರಾದ ಬಗ್ಗೆ ಮತ್ತು ಆಕಾಶವಾಣಿಯಿಂದ ಈಗಿನ ಮೊಬೈಲ್ ತಂತ್ರಜ್ಞಾನದವರೆಗೆ ಆಗಿರುವ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡಿದರು.
ಚಂದ್ರಗ್ರಹ ಮತ್ತು ಮಂಗಳ ಗ್ರಹಗಳಿಗೆ ಉಪಗ್ರಹಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ ಬಗ್ಗೆ ವಿವರಿಸಿದರು. ಆದಿಮಾನವನ ಹಂತದಿಂದ ಇಂದಿನ ಕೃತಕ ಬುದ್ಧಿಮತ್ತೆಯ ಹೊರಗಿನ ತಂತ್ರಜ್ಞಾನದ ಆವಿಷ್ಕಾರ ಮತ್ತು ಬಳಕೆಗೆ ಬಂದ ರೀತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾವೇರಿ ಎಜುಕೇಶನ್ ಅಂಡ್ ರಿಸರ್ಚ್ ಟ್ರಸ್ಟ್ ಅಧ್ಯಕ್ಷ ಬಿ.ಜಿ ಪರಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಬ್ಬಂದಿ ನಿರ್ವಹಣೆ ವಿಭಾಗದ ಮುಖ್ಯಸ್ಥ ಶ್ರೀನಿವಾಸ ರಾಮನುಜಮ್ ಉಪನ್ಯಾಸ ನೀಡಿದರು.
ಸಿ.ಈ.ಆರ್.ಟಿ. ಕಾರ್ಯದರ್ಶಿ ಸಿ.ಜೆ. ಗಂಗಾಧರಗೌಡರವರು ಮಾತನಾಡಿದರು. ಉಪಾಧ್ಯಕ್ಷ ತಮ್ಮಣ್ಣ ಬಿ.ಎಂ ಮತ್ತು ಸಿಐಟಿ ಪ್ರಾಂಶುಪಾಲ ಶ್ರೀಕಂಠಪ್ಪ ಎ.ಎಸ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.