ADVERTISEMENT

ಕೆಆರ್‌ಎಸ್‌ಗೆ ಜಲಶಕ್ತಿ ಇಲಾಖೆ ಅಧಿಕಾರಿಗಳ ಭೇಟಿ: ಪುನಶ್ಚೇತನ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 13:31 IST
Last Updated 27 ಆಗಸ್ಟ್ 2021, 13:31 IST
ಕೆಆರ್‌ಎಸ್‌ಗೆ ಭೇಟಿ ನೀಡಿದ್ದ ಕೇಂದ್ರದ ಉನ್ನತ ಅಧಿಕಾರಿಗಳ ತಂಡ ಜಲಾಶಯದ ಕಾವೇರಿ ಪ್ರತಿಮೆ ಬಳಿ ಸೇರಿದ್ದರು
ಕೆಆರ್‌ಎಸ್‌ಗೆ ಭೇಟಿ ನೀಡಿದ್ದ ಕೇಂದ್ರದ ಉನ್ನತ ಅಧಿಕಾರಿಗಳ ತಂಡ ಜಲಾಶಯದ ಕಾವೇರಿ ಪ್ರತಿಮೆ ಬಳಿ ಸೇರಿದ್ದರು   

ಶ್ರೀರಂಗಪಟ್ಟಣ: ಕೇಂದ್ರ ಜಲಶಕ್ತಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿ ವಿಶ್ವಬ್ಯಾಂಕ್‌ ಅನುದಾನದಲ್ಲಿ ಕೈಗೊಂಡಿರುವ ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ಪರಿಶೀಲಿಸಿದರು.

ಕೇಂದ್ರ ಜಲಶಕ್ತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ, ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ಗುಲ್ಷನ್‌ರಾಜ್‌, ನಿರ್ದೇಶಕ ಎಸ್‌.ಎಸ್‌. ಭಕ್ಷಿ, ಕೇಂದ್ರ ಯೋಜನಾ ಮೇಲ್ವಿಚಾರಣಾ ಸಂಸ್ಥೆ (ಸಿಪಿಎಂಯು) ನಿರ್ದೇಶಕ ಪ್ರಮೋದ್‌ ನಾರಾಯಣ್‌, ಉಪ ನಿರ್ದೇಶಕ ಯೋಗೇಶ್‌ ನಾನಾ ಸಾಹೇಬ್‌ ಭಿಸೆ ಮುಂತಾದವರು ಕಾವೇರಿ ನೀರಾವರಿ ನಿಗದಮ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.

ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯ ಇದೆ ಎಂದು ಸಂಸದೆ ಸುಮಲತಾ ಸಂಸತ್‌ನಲ್ಲಿ ಪ್ರಸ್ತಾಪ ಮಾಡಿದ್ದ ಹಿನ್ನೆಲೆಯಲ್ಲಿ ಈ ಬೇಟಿ ಮಹತ್ವ ಪಡೆದುಕೊಂಡಿದೆ.

ADVERTISEMENT

ವಿಶ್ವಬ್ಯಾಂಕ್‌ನ ₹ 181 ಕೋಟಿ ಅನುದಾನದಲ್ಲಿ ಅಣೆಕಟ್ಟೆಯ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ಮೊದಲನೇ ಹಂತದಲ್ಲಿ ₹ 111 ಕೋಟಿ ಅನುದಾನ ಬಂದಿದ್ದು, ಜಲಾಶಯದ ಗ್ರೌಟಿಂಗ್‌, 136 ಗೇಟ್‌ಗಳ ಬದಲಾವಣೆ, 158 ಗೇಟ್‌ಗಳ ರಿಮೋಟ್‌ ಕಂಟ್ರೋಲಿಂಗ್‌ ಕೆಲಸ ಪ್ರಗತಿಯಲ್ಲಿದೆ.

‘2ನೇ ಹಂತದಲ್ಲಿ ₹ 70 ಕೋಟಿ ಅನುದಾನ ಬಂದಿದ್ದು, ₹ 38.93 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಅಣೆಕಟ್ಟೆಯ 70 ಅಡಿಗಿಂತ ಕೆಳ ಮಟ್ಟದ ಪುಶ್ಚೇತನ ಕಾರ್ಯ ನಡೆಯಲಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.