ADVERTISEMENT

ಸಮತೆ–ಮಮತೆಗಿಂತ ಮಿಗಿಲಾದ ಅಧ್ಯಾತ್ಮವಿಲ್ಲ: ಸಾಹಿತಿ ಜಯಂತ ಕಾಯ್ಕಿಣಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:47 IST
Last Updated 6 ಅಕ್ಟೋಬರ್ 2025, 4:47 IST
<div class="paragraphs"><p>ಪಾಂಡವಪುರದಲ್ಲಿ ಆಯೋಜಿಸಿದ್ದ ‘ತೇಜಸ್ವಿ ನೆನಪು’ ಕಾರ್ಯಕ್ರಮದಲ್ಲಿ ಸಾಹಿತಿ ಜಯಂತಿ ಕಾಯ್ಕಿಣಿ ಅವರಿಗೆ&nbsp;ತೇಜಸ್ವಿ ಬಳಗದ ವತಿಯಿಂದ ‘ಗೌರೀಶ ಕಾಯ್ಕಿಣಿ ಅವರೊಂದಿಗೆ ಜಯಂತ್‌’ ಇರುವ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ಧನ್ಯಕುಮಾರ್‌, ಡಾ.ಅಭಿನಯ್‌, ಡಾ.ಕೃಷ್ಣ, ರಂಗಕರ್ಮಿ ಮಂಡ್ಯ ರಮೇಶ್‌, ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಪಾಲ್ಗೊಂಡಿದ್ದರು&nbsp; </p></div>

ಪಾಂಡವಪುರದಲ್ಲಿ ಆಯೋಜಿಸಿದ್ದ ‘ತೇಜಸ್ವಿ ನೆನಪು’ ಕಾರ್ಯಕ್ರಮದಲ್ಲಿ ಸಾಹಿತಿ ಜಯಂತಿ ಕಾಯ್ಕಿಣಿ ಅವರಿಗೆ ತೇಜಸ್ವಿ ಬಳಗದ ವತಿಯಿಂದ ‘ಗೌರೀಶ ಕಾಯ್ಕಿಣಿ ಅವರೊಂದಿಗೆ ಜಯಂತ್‌’ ಇರುವ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ಧನ್ಯಕುಮಾರ್‌, ಡಾ.ಅಭಿನಯ್‌, ಡಾ.ಕೃಷ್ಣ, ರಂಗಕರ್ಮಿ ಮಂಡ್ಯ ರಮೇಶ್‌, ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಪಾಲ್ಗೊಂಡಿದ್ದರು 

   

–ಪ್ರಜಾವಾಣಿ ಚಿತ್ರ 

ಪಾಂಡವಪುರ (ಮಂಡ್ಯ): ‘ಸಮತೆ ಮತ್ತು ಮಮತೆಗಿಂತ ಮಿಗಿಲಾದ ಅಧ್ಯಾತ್ಮವಿಲ್ಲ ಎಂಬುದನ್ನು ತೇಜಸ್ವಿ ನಂಬಿದ್ದರು. ಈ ಮೌಲ್ಯ, ಆದರ್ಶಗಳನ್ನು ಇಂದಿನ ಪರಿಸ್ಥಿತಿಯಲ್ಲಿ ಪುನರ್‌ ಸ್ಥಾಪಿಸುವ ಅಗತ್ಯವಿದೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು. 

ADVERTISEMENT

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತೇಜಸ್ವಿ ಬಳಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಮಕ್ಕಳ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ತೇಜಸ್ವಿ ನೆನಪು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಹೊಸ ತಲೆಮಾರಿನ ಓದುಗರು ಪಶ್ಚಿಮ ಘಟ್ಟ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿಪೂರ್ಣ ಬರಹಗಳನ್ನು ಹೆಚ್ಚಾಗಿ ಓದುತ್ತಿದ್ದಾರೆ. ಕತೆ, ಕಾವ್ಯ, ಕಾದಂಬರಿಯಂಥ ಸೃಜನಶೀಲ ಬರಹಗಳನ್ನು ಓದುವವರ ಸಂಖ್ಯೆ ತೀರಾ ಕಡಿಮೆ. ಇಂದಿನ ಯುವಜನರಿಗೆ ಆಯ್ಕೆ ಸಂಕಟಗಳಿವೆ. ತೇಜಸ್ವಿ ಕತೆಗಳು ಬದುಕಿನ ಬಗ್ಗೆ ಪ್ರೀತಿ ಹುಟ್ಟಿಸಿ, ಪರ್ಯಾಯ ಲೋಕವನ್ನೇ ಕಟ್ಟಿ ಕೊಡುತ್ತವೆ. ಈ ಕಿಟಕಿಯನ್ನು ತೆರೆದು ನೋಡಬೇಕಿದೆ ಎಂದರು. 

ಬರಹದಲ್ಲಿ ಕಾಂತತ್ವ: ತೇಜಸ್ವಿ ಬರಹದಲ್ಲಿ ಕಾಂತತ್ವ ಗುಣವಿತ್ತು. ಅವರು ಕಂಪನ ಕೇಂದ್ರವಾಗಿದ್ದರು. ಸಾಮಾಜಿಕ ಮಾಧ್ಯಮಗಳು ಇಲ್ಲದ ಕಾಲಘಟ್ಟದಲ್ಲಿ ನಮ್ಮೆನ್ನೆಲ್ಲ ಅವರು ತಮ್ಮ ಬರಹದ ಮೂಲಕ ಒಂದುಗೂಡಿಸಿದರು. ನಿಶ್ಯಬ್ದ ಅವರ ಅವಿಭಾಜ್ಯ ಅಂಗವಾಗಿತ್ತು. ಹೀಗಾಗಿಯೇ ಮಾತಿನ ಅವಶ್ಯವಿಲ್ಲದ ಬರಹ, ಛಾಯಾಗ್ರಹಣ, ಮೀನಿಗೆ ಗಾಳ ಹಾಕುವ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಅವರ ಬದುಕು ಮತ್ತು ಬರಹ ಒಂದು ವಿಸ್ಮಯ ಎಂದು ಬಣ್ಣಿಸಿದರು. 

ನಿಗೂಢ ಮನುಷ್ಯರು, ಮಾಯಾಲೋಕ, ಕರ್ವಾಲೊ ಕೃತಿಗಳಲ್ಲಿನ ‘ಸೈಲೆನ್ಸ್‌’ ನಮ್ಮನ್ನು ಸೆಳೆಯುತ್ತದೆ. ಅವರು ಮೌನವಾಗಿದ್ದುಕೊಂಡೇ ಅನೇಕ ಹೋರಾಟಗಳನ್ನು ನಡೆಸಿದರು. ಅಂತರಂಗ–ಬಹಿರಂಗದಲ್ಲಿ ವ್ಯತ್ಯಾಸಗಳಿಲ್ಲದಂತೆ ಬದುಕಿದ್ದರು. ಸಮಾಜ ಮತ್ತು ಬದುಕನ್ನು ಪ್ರೀತಿಸಿದಾಗ ಅದು ಖಾಸಗಿಯಾಗುತ್ತದೆ. ನಾವು ಖಾಸಗಿಯಾಗಿ ಗಳಿಸಿದ್ದು ಸಾಮಾಜಿಕವಾಗುತ್ತದೆ. ಆಗ ಬದುಕು ಸರಳವಾಗುತ್ತದೆ ಎಂದು ಅರ್ಥೈಸಿದರು. 

ರಂಗಕರ್ಮಿ ಮಂಡ್ಯ ರಮೇಶ್ ಮತ್ತು ಪ್ರಗತಿಪರ ಚಿಂತಕ ಎಂ.ವಿ. ಕೃಷ್ಣ ಅವರು ತೇಜಸ್ವಿ ಕುರಿತು ಮಾತನಾಡಿದರು. ಜಯಂತ ಕಾಯ್ಕಿಣಿ ಅವರಿಗೆ, ಅವರ ತಂದೆ ಗೌರೀಶ ಕಾಯ್ಕಿಣಿ ಮತ್ತು ಜಯಂತ್‌ ಇರುವ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. 

ಭೈರಪ್ಪಗೆ ಶ್ರದ್ಧಾಂಜಲಿ: ಇತ್ತೀಚೆಗೆ ನಿಧನರಾದ ಸಾಹಿತಿ ಎಸ್‌.ಎಲ್. ಭೈರಪ್ಪ ಮತ್ತು ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಉಪನ್ಯಾಸಕಿ ಉಷಾರಾಣಿ ನಿರೂಪಿಸಿದರು. ಡಾ.ಕೆ.ಎಸ್‌.ಅಭಿನಯ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಗಲಿಂಗೇಗೌಡ ಅವರು ತೇಜಸ್ವಿ ಕಾವ್ಯವನ್ನು ಹಾಡಿದರು. ಕಾರ್ಯಕ್ರಮದಲ್ಲಿ ಬಿಜಿಎಸ್‌ ಆಸ್ಪತ್ರೆಯ ತಜ್ಞವೈದ್ಯ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಕಾಶ್‌ ಮೇನಾಗರ, ತೇಜಸ್ವಿ ಬಳಗದ ನವೀನ್‌ ಸಂಗಾಪುರ, ಎಚ್‌.ಆರ್‌. ಧನ್ಯಕುಮಾರ್‌, ಮೋಹನ್‌ ಕುಮಾರ್‌, ಅಮಿತ್‌ ಕೃಷ್ಣ, ಗುರುಮೂರ್ತಿ, ಮನು, ಹರೀಶ್‌, ಕುಮಾರ್‌ ಇದ್ದರು. 

‘ಸಾಮಾಜಿಕ ಋಣಾನುಬಂಧ ಮರೆಯದಿರಿ’

‘ನಾವು ಬಳಸುವ ಪ್ರತಿ ವಸ್ತುಗಳ ತಯಾರಿಕೆಯಲ್ಲಿ ವಿವಿಧ ಜಾತಿ, ಧರ್ಮಗಳಿಗೆ ಸೇರಿದ ಶ್ರಮಿಕ ವರ್ಗದವರ ಬೆವರಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಶ್ರಮಿಕರ ಋಣದಲ್ಲಿ ಬದುಕುತ್ತಿದ್ದೇವೆ. ಈ ಋಣಾನುಬಂಧವನ್ನು ಎಂದಿಗೂ ಮರೆಯಬಾರದು. ಸಾಮಾಜಿಕ ಋಣಾನುಬಂಧದ ಬಗ್ಗೆ ಬರೆಯುವುದೇ ಸಾಹಿತ್ಯ. ತೇಜಸ್ವಿ ಬರಹಗಳನ್ನು ಓದುವಾಗ ಅವರು ನಮ್ಮ ಬಗ್ಗೆ ಹೇಳುತ್ತಿದ್ದಾರೆ ನಮ್ಮನ್ನು ಪ್ರೀತಿಸುತ್ತಿದ್ದಾರೆ ಅಂತ ಅನಿಸುತ್ತದೆ. ಹೀಗಾಗಿ ತೇಜಸ್ವಿ ಎಲ್ಲರಿಗೂ ಆಪ್ತರಾಗುತ್ತಾರೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.  ‘ನಮ್ಮನ್ನು ಮತ್ತಷ್ಟು ಕೌಟುಂಬಿಕವಾಗಿಸುವ ಮಾನವೀಯವಾಗಿಸುವ ದೊಡ್ಡ ಆವರಣವೇ ಸಾಹಿತ್ಯ. ಸಮಾಜವೇ ಒಂದು ಕುಟುಂಬ ಅಂತ ನಂಬಿ ಬರೆದವರು ತೇಜಸ್ವಿ. ತೇಜಸ್ವಿ ಬಳಗ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.