ADVERTISEMENT

ವೆನಿಸ್ ಮಾದರಿಯಲ್ಲಿ ಪಟ್ಟಣ ಅಭಿವೃದ್ಧಿ

ಜೆಡಿಎಸ್ ಮುಖಂಡರ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:12 IST
Last Updated 19 ಮೇ 2019, 11:12 IST
ಶ್ರೀರಂಗಪಟ್ಟಣ ಪುರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಪಕ್ಷದ ಬಿ ಫಾರಂ ವಿತರಿಸಿದರು
ಶ್ರೀರಂಗಪಟ್ಟಣ ಪುರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಪಕ್ಷದ ಬಿ ಫಾರಂ ವಿತರಿಸಿದರು   

ಶ್ರೀರಂಗಪಟ್ಟಣ: ಇಟಲಿಯ ವೆನಿಸ್ ಪಟ್ಟಣದ ಮಾದರಿಯಲ್ಲಿ ಶ್ರೀರಂಗ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಪುರಸಭೆ ಚುನಾವಣೆ ‍ಪ್ರಯುಕ್ತ ಪಟ್ಟಣದಲ್ಲಿನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲಾಗುವುದು. ಪಟ್ಟಣದ ಅಭಿವೃದ್ಧಿಗೆ ₹100 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಗೊಂಡಿದ್ದು, ಈಗಾಗಲೇ ₹9 ಕೋಟಿ ಹಣ ಬಿಡುಗಡೆಯಾಗಿದೆ. ಕೋಟೆಗೆ ಹೊಂದಿಕೊಂಡಿರುವ ಕಂದಕಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸಿ ದೋಣಿ ವಿಹಾರ ಆರಂಭಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ಅವರು
ತಿಳಿಸಿದರು.

ADVERTISEMENT

ಮೈಸೂರು ದಸರಾ ಮಾದರಿಯಲ್ಲಿ ಶ್ರೀರಂಗಪಟ್ಟಣ ದಸರಾ ಉತ್ಸವವನ್ನೂ ಆಚರಿಸುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು– ಮೈಸೂರು ಹೆದ್ದಾರಿಯಿಂದ ಪೂರ್ವ ಕೋಟೆ ದ್ವಾರದವರೆಗೆ ರಸ್ತೆ ವಿಸ್ತರಣೆ ಮಾಡಿ ಐತಿಹಾಸಿಕ ಕೋಟೆಯ ಸಂಪೂರ್ಣ ದೃಶ್ಯ ಗೋಚರಿಸುವಂತೆ ಮಾಡಲಾಗುವುದು. ಕೋಟೆ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಹುಲ್ಲು ಹಾಸು ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸಲಾಗುವುದು. ಪ್ರಮುಖ ಬೀದಿ, ವೃತ್ತಗಳು, ಚೌಕಗಳಿಗೆ ಪಾರಂಪರಿಕ ದೀಪಗಳನ್ನು ಅಳವಡಿಸಲಾಗುತ್ತದೆ ಎಂದರು.

ಪಟ್ಟಣದ ಚೆಕ್‌ಪೋಸ್ಟ್‌ನಿಂದ ತಾಲ್ಲೂಕು ಕಚೇರಿವರೆಗೆ ದ್ವಿಪಥ ರಸ್ತೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ₹50 ಕೋಟಿ ವೆಚ್ಚದಲ್ಲಿ ಪಟ್ಟಣ ಹಾಗೂ ಗಂಜಾಂ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮುಕುಂದ, ನಗರ ಘಟಕದ ಅಧ್ಯಕ್ಷ ಎಂ. ಸುರೇಶ್, ಮುಖಂಡರಾದ ತಿಲಕ್‌ ಕುಮಾರ್, ಎಂ. ನಂದೀಶ್, ಸಚಿನ್ ಚಂದ್ರಶೇಖರ್, ಸತ್ಯನಾರಾಯಣ ಹಾಗೂ ಬಿ.ವಿ. ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.