ADVERTISEMENT

ಬೆಳೆಸಿದ ಪಕ್ಷಕ್ಕೇ ದ್ರೋಹ; ಸಚಿವ ಕೆ.ಸಿ.ನಾರಾಯಣಗೌಡ ವಿರುದ್ಧ ಶಾಸಕ ತಮ್ಮಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 3:01 IST
Last Updated 29 ನವೆಂಬರ್ 2021, 3:01 IST
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಡೆದ ಸ್ಥಳೀಯ ಗ್ರಾ.ಪಂ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾ.ಪಂ.ಅಧ್ಯಕ್ಷರು, ಸದಸ್ಯರನ್ನು ಶಾಸಕ ಡಿ.ಸಿ.ತಮ್ಮಣ್ಣ, ಅಪ್ಪಾಜಿಗೌಡ ಅಭಿನಂದಿಸಿದರು. ಸುರೇಶ್ ಗೌಡ, ನಲ್ಲಿಗೆರೆ ಬಾಲು, ಕೆಸ್ತೂರು ದಾಸೆಗೌಡ, ಮಾದನಾಯಕನಹಳ್ಳಿ ರಾಜಣ್ಣ ಇದ್ದರು
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಡೆದ ಸ್ಥಳೀಯ ಗ್ರಾ.ಪಂ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾ.ಪಂ.ಅಧ್ಯಕ್ಷರು, ಸದಸ್ಯರನ್ನು ಶಾಸಕ ಡಿ.ಸಿ.ತಮ್ಮಣ್ಣ, ಅಪ್ಪಾಜಿಗೌಡ ಅಭಿನಂದಿಸಿದರು. ಸುರೇಶ್ ಗೌಡ, ನಲ್ಲಿಗೆರೆ ಬಾಲು, ಕೆಸ್ತೂರು ದಾಸೆಗೌಡ, ಮಾದನಾಯಕನಹಳ್ಳಿ ರಾಜಣ್ಣ ಇದ್ದರು   

ಮದ್ದೂರು: ‘ನಮ್ಮ ಪಕ್ಷದಿಂದಲೇ ಬೆಳೆದು, ಅನ್ನತಿಂದು, ಸ್ವಾರ್ಥಕ್ಕಾಗಿ ಈಗ ಬೇರೆ ಪಕ್ಷಕ್ಕೆ ಹೋಗಿ ದ್ರೋಹ ಮಾಡಿದವರು ನಮ್ಮ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಥಳೀಯ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಡೆದ ಗ್ರಾ.ಪಂ ಸದಸ್ಯರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಬಂದಾಗ ಮಾತನಾಡುವ ಅವರ ಬೂಟಾಟಿಕೆಯನ್ನು ಜನ ಗಮನಿಸುತ್ತಿದ್ದಾರೆ. ಮುಂದೆ ಬರುವ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಅಂಥವರ ಸುಳ್ಳು ಮಾತುಗಳಿಗೆ, ಟೀಕೆಗಳಿಗೆ ಕಿವಿಗೊಡುವ ಅಗತ್ಯವಿಲ್ಲ’ ಎಂದರು.

ADVERTISEMENT

‘ಜಿಲ್ಲೆಯ ಜೆಡಿಎಸ್ ಶಾಸಕರು ನಮ್ಮ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುತ್ತಾರೆ ಎಂದಿದ್ದಾರೆ. ಮುಖ್ಯಮಂತ್ರಿ ಕೆಲವು ಶಾಸಕರಿಗೆ ಸೀಮಿತರಲ್ಲ. ಎಲ್ಲ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಾರೆ. ಅದು ಅವರ ಕರ್ತವ್ಯ’ ಎಂದರು.

ನಾಗಮಂಗಲ ಶಾಸಕ ಸುರೇಶ್‌ಗೌಡ ಮಾತನಾಡಿ, ‘ಮಂಡ್ಯ ಜಿಲ್ಲೆಯು ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದು, ಪಕ್ಷದ ಸ್ಥಳೀಯ ಸದಸ್ಯರು ಅಪ್ಪಾಜಿಗೌಡ ಅವರನ್ನು ಬೆಂಬಲಿಸಬೇಕು’ ಎಂದರು.

ಮನ್‌ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎನ್.ಅಪ್ಪಾಜಿಗೌಡ ಮಾತನಾಡಿದರು.

ತಾಲ್ಲೂಕಿನ ಕೆಸ್ತೂರು, ಗೆಜ್ಜಲಗೆರೆ, ಕೆ.ಹೊನ್ನಲಗೆರೆ ಭಾಗಗಳಲ್ಲಿ ಪ್ರಚಾರ ಮಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಗೌಡ, ಕಾರ್ಯಾಧ್ಯಕ್ಷ ಕೆ.ದಾಸೇಗೌಡ, ಜೆಡಿಎಸ್ ಮುಖಂಡ ಮಾದನಾಯಕನಹಳ್ಳಿ ರಾಜಣ್ಣ, ಜಿಪಂ ಮಾಜಿ ಸದಸ್ಯ ಕೆ.ರವಿ, ಮಧುರಾಮಣಿ ಅಪ್ಪಾಜಿಗೌಡ, ಗ್ರಾ.ಪಂ.ಅಧ್ಯಕ್ಷರಾದ ಉಮೇಶ್, ಹರೀಶ್, ರವಿ, ಇಂದಿರಾ, ಅನಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.