ADVERTISEMENT

‘ಕೋವಿಡ್: ಪತ್ರಕರ್ತರ ಸೇವೆ ಶ್ಲಾಘನೀಯ’

ಮದ್ದೂರಿನಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 3:00 IST
Last Updated 3 ಫೆಬ್ರುವರಿ 2021, 3:00 IST
ಮದ್ದೂರು ಪಟ್ಟಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು 
ಮದ್ದೂರು ಪಟ್ಟಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು    

ಮದ್ದೂರು: ‘ಪತ್ರಕರ್ತರು ಕೋವಿಡ್–19 ಸಂಕಷ್ಟದ ದಿನಗಳಲ್ಲೂ ಕರ್ತವ್ಯ ನಿರ್ವಹಿಸಿದ್ದು ವಿಶೇಷ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಶ್ಲಾಘನೆ ವ್ಯಕ್ತಪಡಿಸಿದರು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ ಪತ್ರಿಕೋದ್ಯಮ, ಇದು ಸಮಾಜದ ಆಗು-ಹೋಗುಗಳ ಪ್ರತಿಬಿಂಬ’ ಎಂದು ಹೇಳಿದರು.

ADVERTISEMENT

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವನಂದ ತಗಡೂರು ಮಾತನಾಡಿ, ‘ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇರುವ ಪತ್ರಕರ್ತರ ಸಮಸ್ಯೆ, ಅವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಗಮನ ಹರಿಸಲಾಗುವುದು’ ಎಂದರು.

ಸಭೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಎದುರಿಸಿದ ಸಂಕಷ್ಟ, ಸಂಘದ ಬೈಲಾ ತಿದ್ದುಪಡಿ, ಅಭಿವೃದ್ಧಿ ಸೇರಿದಂತೆ ಇನ್ನಿತರೆ ವಿಷಯದ ಬಗ್ಗೆ ಚರ್ಚೆ ನಡೆದವು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಂಘದ ಸದಸ್ಯರುಗಳು ಬಸ್ ಪಾಸ್, ವಿಮೆ ಸೇರಿದಂತೆ ಇನ್ನಿತರೆ ಸೌಲಭ್ಯಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.

ಸಭೆ ಆರಂಭಕ್ಕೂ ಮುನ್ನ ಶಿವಪುರಧ್ವಜ ಸತ್ಯಾಗ್ರಹ ಸೌಧದ ಬಳಿಯಿಂದ ವೇದಿಕೆ ವರೆಗೆ ಡೊಳ್ಳುಕುಣಿತ, ವೀರಗಾಸೆ, ಪೂಜಾಕುಣಿತ ಸೇರಿದಂತೆ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ ಸಾಗಿತು. ಗಣ್ಯರು, ಪತ್ರಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಮದ್ದೂರು ತಾಲ್ಲೂಕಿನ ಗೋಪಾಲ ಶ್ರೀವತ್ಸ, ಎಂ.ಜಿ. ಸೀತಾರಾಮ ರಾವ್ ಹಾಗೂ ಕೌಡ್ಲೆ ಚನ್ನೇಗೌಡ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ,ಏಷ್ಯಾ ಪತ್ರಕರ್ತರ ಸಂಘದ ಸಂಚಾಲಕ ಮದನ್ ಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಂ, ಪುಂಡಲೀಕ ಬಾಳೋಜಿ, ಕಾರ್ಯದರ್ಶಿಗಳಾದ ಸಂಜೀವ್ ರಾವ್, ಬಂಗ್ಲೆ ಮಲ್ಲಿಕಾರ್ಜುನ, ಖಜಾಂಚಿ ಉಮೇಶ್ವರ್, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಮೋಹನ್, ತಾಲೂಕು ಘಟಕದ ಅಧ್ಯಕ್ಷ ರವಿ ಸಾವಂದಿಪುರ, ಜಿಲ್ಲಾ ನಿರ್ದೇಶಕ ಶಿವನಂಜಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.