ADVERTISEMENT

ಉತ್ಸವಕ್ಕೂ ಮುನ್ನ ಸಹಸ್ರಕಳಶಾಭಿಷೇಕ

ಮೇಲುಕೋಟೆ ವೈರಮುಡಿ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 1:44 IST
Last Updated 12 ಫೆಬ್ರುವರಿ 2021, 1:44 IST
ಮೇಲುಕೋಟೆಯಲ್ಲಿ ವೈರಮುಡಿ ಜಾತ್ರಾಮಹೊತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಶಾಸಕ ಸಿ.ಎಸ್ ಪುಟ್ಟರಾಜು ಭಾಗವಹಿಸಿದ್ದರು
ಮೇಲುಕೋಟೆಯಲ್ಲಿ ವೈರಮುಡಿ ಜಾತ್ರಾಮಹೊತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಶಾಸಕ ಸಿ.ಎಸ್ ಪುಟ್ಟರಾಜು ಭಾಗವಹಿಸಿದ್ದರು   

ಮೇಲುಕೋಟೆ: ವಿಶ್ವಪ್ರಸಿದ್ಧ ವೈರಮುಡಿ ಜಾತ್ರಾಮಹೋತ್ಸವಕ್ಕೂ ಮುನ್ನ ಐತಿಹಾಸಿಕ ಸಹಸ್ರಕಳಶಾಭಿಷೇಕ ಹಮ್ಮಿ ಕೊಳ್ಳಲು ಗುರುವಾರ ಜಿಲ್ಲಾಧಿಕಾರಿಗಳ ಸಮಕ್ಷಮ ಮೇಲುಕೋಟೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೊರೊನಾದಿಂದಾಗಿ ವೈರಮುಡಿ ಉತ್ಸವ ಸ್ಥಗಿತಗೊಂಡ ಕಾರಣ ಆಗಮೋಕ್ತ ಸಂಪ್ರದಾಯದ ಹಿನ್ನೆಲೆಯಲ್ಲಿ ಸಹಸ್ರ ಕಳಶಾಭಿಷೇಕ ನಡೆಸಿ ಮಾರ್ಚ್‌ನಲ್ಲಿ ವೈರಮುಡಿ ಬ್ರಹ್ಮೋತ್ಸವ ನಡೆಸಲು ದೇಗುಲದ ಸ್ಥಾನೀಕರು, ಅರ್ಚಕರ ಸಲಹೆಯನ್ನು ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ನಡೆದ ವೈರಮುಡಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಆದ್ಯತೆ ಮೇಲೆ ಸಹಸ್ರಕಳಶಾಭಿಷೇಕದ ಬಗ್ಗೆ ಚರ್ಚೆ ನಡೆಯಿತು.

ADVERTISEMENT

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸಹಸ್ರ ಕಳಶಾಭಿಷೇಕಕ್ಕೆ ದಿನಾಂಕ ನಿಗದಿ ಮಾಡಿ ಪ್ರಕಟಿಸಲಾಗುವುದು. ಈ ಧಾರ್ಮಿಕ ವಿಶೇಷವನ್ನು ಬ್ರಹ್ಮೋತ್ಸವಕ್ಕೂ ಮುನ್ನ ನಡೆಸಲಾಗುತ್ತದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾ ಗಿರುವು ದರಿಂದ ವ್ಯಾಪಕ ಪ್ರಚಾರ ನಡೆಸಿ ಭಕ್ತರಿಗೆ ಮಾಹಿತಿ ನೀಡಬೇಕು. ವೈಭವದಿಂದ ಧಾರ್ಮಿಕ ಕೈಂಕರ್ಯ ನಡೆಸಲಾಗುವುದು ಎಂದು ಹೇಳಿದರು.

ಮಾರ್ಚ್‌ನಲ್ಲಿ ವೈರಮುಡಿ ಜಾತ್ರಾ ಮಹೋತ್ಸವವನ್ನೂ ವೈಭವ ದಿಂದ ನಡೆಸಲಾಗುವುದು. ವಿಶ್ವದ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ. ದೇವಾಲಯದ ಸ್ಥಾನೀಕರು ಸಹಸ್ರ ಕಳಸಾಭಿಷೇಕದ ರೂಪುರೇಷೆ ಸಿದ್ಧಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ವೈರ ಮುಡಿ ಬ್ರಹ್ಮೋತ್ಸವಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಚೆಲುವನಾರಾಯಣನ ಸಹಸ್ರ ಕಳಶಾಭಿಷೇಕ ಮತ್ತು ವೈರಮುಡಿ ಜಾತ್ರಾಮಹೋತ್ಸವವವನ್ನು ವೈಭವವಾಗಿ ನಡೆಸಬೇಕು. ಧಾರ್ಮಿಕ ಕೈಂಕರ್ಯಗಳಿಗೆ ಲೋಪ ಉಂಟಾಗಬಾರದು ಎಂದರು.

ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತ ವಿಜಯಕುಮಾರ್, ರಾಮಾ ನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್ ಮಾತನಾಡಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಮುಜರಾಯಿ ತಹಶೀಲ್ದಾರ್ ಉಮಾ, ಮನ್‌ಮುಲ್‌ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಅವ್ವಗಂಗಾಧರ್, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಮಂಗಳಮ್ಮ, ದೇವಾಲಯದ ಅರ್ಚಕ ವರದರಾಜಭಟ್ಟರ್, ಪ್ರಥಮ ಸ್ಥಾನೀಕ ಕರಗಂ ನಾರಾಯಣ ಅಯ್ಯಂಗಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.