
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಕಸಾಪ ಹೋಬಳಿ ಘಟಕ ಹಾಗೂ ಅಲಯನ್ಸ್ ಕ್ಲಬ್ ಶನಿವಾರ ಏರ್ಪಡಿಸಿದ್ದರು
ಶ್ರೀರಂಗಪಟ್ಟಣ: ‘ಕನ್ನಡ ನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಅಸ್ಮಿತೆಗೆ ಕುತ್ತು ಬಂದೊದಗಿದೆ’ ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಕಸಾಪ ಹೋಬಳಿ ಘಟಕ ಹಾಗೂ ಅಲಯನ್ಸ್ ಕ್ಲಬ್ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ ಹಾಗೂ ಜೀವನ ವಿಧಾನವೂ ಹೌದು. ನಮ್ಮ ಕಲೆ, ಇತಿಹಾಸ, ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಾ ಬಂದಿದೆ. ಆದರೆ ಅನ್ಯ ಭಾಷೆಯ ಅನುಕರಣೆಯಿಂದ ಕನ್ನಡಿಗರ ತಾಯ್ನುಡಿಯ ಮಹತ್ವ ಕುಂದುತ್ತಿದೆ. ನಗರ ವಾಸಿಗಳು ಕನ್ನಡವನ್ನು ತಾತ್ಸಾರ ಮಾಡುತ್ತಿರುವುದರಿಂದ ನಮ್ಮ ಜನಪದರು ಸಹಸ್ರಾರು ರ್ಷಗಳಿಂದ ಬಳಸುತ್ತಿದ್ದ ಕನ್ನಡ ನುಡಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ಶಾಲೆ, ಕಾಲೇಜುಗಳಲ್ಲಿ ಕನ್ನಡ ಮಾಧ್ಯಮವನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ಕನ್ನಡ ಭಾಷೆ ನಿಸ್ತೇಜವಾಗಲಿದೆ’ ಎಂದು ಹೇಳಿದರು.
ಅಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಸಾಲು ಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಹಾಗೂ ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು. ತೈಲೂರು ವೆಂಕಟಕಕೃಷ್ಣ, ಅಲಯನ್ಸ್ ಸೌತ್ ಮಲ್ಟಿಪಲ್ ಅಧ್ಯಕ್ಷ ಕೆ.ಟಿ. ಹನುಮಂತು ಹಾಗೂ ಮಂಡ್ಯ ಅಲಯನ್ಸ್ ಕ್ಲಬ್ ಎರಡನೇ ರಾಜ್ಯಪಾಲ ಕೆ.ಎಸ್. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಅರಕೆರೆ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆ ಪ್ರಾಂಶುಪಾಲೆ ಅನುಪಮಾ ಅಧ್ಯಕ್ಷೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎ. ಸೋಮಶೇಖರ್, ರಂಗಭೂಮಿ ಕಲಾವಿದ ಎ.ಎಚ್. ಚನ್ನೇಗೌಡ, ಅಲಯನ್ಸ್ ಕ್ಲಬ್ ಕಾರ್ಯದರ್ಶಿ ಎ.ಎಸ್. ಕಿಶೋರ್, ಖಜಾಂಚಿ ಎ.ಎಸ್. ಅಭಿಷೇಕ್, ಟಿ.ಎಚ್. ಶಿವಕುಮಾರ್. ಎಂ.ಬಿ. ಅನಂತಯ್ಯ, ಎ.ಎಂ. ಜಗದೀಶ್, ಕುಮಾರ್, ನಾಗೇಂದ್ರು, ಸುಮಾ, ಮೀನಾಕ್ಷಿ, ಶಿವಶಂಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.