ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನಲ್ಲಿ ‘ಕನ್ನಡ ಭವನ’ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ₹5 ಕೋಟಿ ಅನುದಾನದಲ್ಲಿ ಅತಿ ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಸಲ್ಲಿ ಸಿದ್ಧಪಡಿಸಿರುವ ‘ಬೆಲ್ಲದಾರತಿ’ ಸ್ಮರಣ ಸಂಚಿಕೆಯನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಲ್ಲದ ಆರತಿ ಸಲ್ಲಿಸಿ ಬಿಡುಗಡೆಗೊಳಿಸಿದ ನಂತರ ಅವರು ಮಾತನಾಡಿದರು.
ಕನ್ನಡ ಭವನ ನಿರ್ಮಾಣಕ್ಕೆ ಸಾಹಿತ್ಯ ಸಮ್ಮೇಳನದ ಉಳಿತಾಯ ಹಣ ₹2.20 ಕೋಟಿ ಮೀಸಲಿಡಲಾಗಿತ್ತು. ಜಿಲ್ಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಶಾಸಕರ ಅನುದಾನದಡಿ ದಿನೇಶ್ ಗೂಳಿಗೌಡ, ರಮೇಶ ಬಂಡಿಸಿದ್ದೇಗೌಡ ಹಾಗೂ ಪಿ. ರವಿಕುಮಾರ ಅವರು ತಲಾ ₹1 ಕೋಟಿ ಅನುದಾನ ಕೊಡಲು ಒಪ್ಪಿರುತ್ತಾರೆ. ಒಟ್ಟಾರೆ ಅತ್ಯಾಕರ್ಷಕವಾಗಿ ₹5 ಕೋಟಿ ಅನುದಾನದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಸಾಂಸ್ಕೃತಿಕ ವಿಶ್ವರೂಪ ದರ್ಶನ:
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸ್ಮರಣ ಸಂಚಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿಮಾನ ಹಾಗೂ ಹೆಮ್ಮೆಯ ಭಾಗವಾಗಿದೆ. ಇದು ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿದೆ ಎಂದರು.
ಬೆಲ್ಲದಾರತಿ ಮಂಡ್ಯ ಜಿಲ್ಲೆಯ ಮಹತ್ವದ ದಾಖಲೆ. ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ವಿಶ್ವರೂಪ ದರ್ಶನ, 1000 ಪುಟಗಳನ್ನು ಹೊಂದಿರುವ ಈ ಗ್ರಂಥ 132 ಲೇಖನಗಳನ್ನು ಒಳಗೊಂಡಿದೆ. ಸಮ್ಮೇಳನಾಧ್ಯಕ್ಷರು, ಕರ್ನಾಟಕ ಭಾರತ, ವಿಶ್ವ ಕರ್ನಾಟಕ, ಅಭಿವೃದ್ಧಿ ಭಾರತ ಮತ್ತು ಮಧುರ ಮಂಡ್ಯ ಎಂಬ 5 ವಿಭಾಗಗಳು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ತಾಕತ್ತು ಸಾಹಿತ್ಯಕ್ಕಿದೆ. ಜಗತ್ತನ್ನು ಬ್ರಹ್ಮ ಸೃಷ್ಟಿಸಿದರೆ, ಕಾವ್ಯವನ್ನು ಬ್ರಹ್ಮಾಂಡದ ರೀತಿ ಕವಿ ಸೃಷ್ಟಿಸುತ್ತಾನೆ. ಒಳ್ಳೆಯ ಅಥವಾ ಕೆಟ್ಟ ಸಮಾಜವನ್ನು ಸ್ಥಾಪಿಸುವ ಶಕ್ತಿ ಕವಿ ಬರವಣಿಗೆಯ ಮೇಲೆ ನಿಂತಿದೆ ಅಂತಹ ಸಾಮರ್ಥ್ಯ ಸಾಹಿತಿ ಹಾಗೂ ಸಾಹಿತ್ಯಕ್ಕಿದೆ ಎಂದು ಹೇಳಿದರು.
ಸ್ಮರಣ ಸಂಚಿಕೆ ಕುರಿತು ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ ಹಾಗೂ ಮೀರಾ ಶಿವಲಿಂಗಯ್ಯ ಅವರು ಸಂಕ್ಷಿಪ್ತವಾಗಿ ಮಾತನಾಡಿದರು.
ಸನ್ಮಾನ:
ಬೆಲ್ಲದಾರತಿ ಸ್ಮರಣ ಸಂಚಿಕೆ ಹೊರತರಲು ಶ್ರಮಿಸಿದ ಬಿ.ಸಿ. ಶಿವಾನಂದಮೂರ್ತಿ, ತೈಲೂರು ವೆಂಕಟಕೃಷ್ಣ, ಚಿಕ್ಕಮರಳಿ ಬೋರೇಗೌಡ, ಮೀರಾ ಶಿವಲಿಂಗಯ್ಯ, ಮ.ರಾಮಕೃಷ್ಣ, ಜಿ.ಆರ್. ಚಂದ್ರಶೇಖರ್, ಕೋಮಲ್ ಕುಮಾರ್, ಕೃಷ್ಣಮೂರ್ತಿಅವರನ್ನು ಗೌರವಿಸಲಾಯಿತು.
ಶಾಸಕರ ಗೈರು:
ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರಾಗಿದ್ದ ಹಾಗೂ ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ, ಕೆ.ಮಂಜು, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಮಾರಂಭಕ್ಕೆ ಗೈರಾಗಿದ್ದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಪದಾಧಿಕಾರಿಗಳು ಹಾಜರಿದ್ದರು.
8 ತಿಂಗಳ ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಹೇಶ ಜೋಶಿ, ಕೆಲವು ಶಾಸಕರ ಗೈರು ಈ ಸ್ಮರಣ ಸಂಚಿಕೆಯು ‘ಸಾಂಸ್ಕೃತಿಕ ವಿಶ್ವರೂಪ ದರ್ಶನ’
‘ಕನ್ನಡ ಭವನಕ್ಕೆ ಶ್ರೀಪುರುಷ ಹೆಸರಿಡಿ’
ಮಂಡ್ಯ ಶಾಸಕ ಪಿ. ರವಿಕುಮಾರ್ ಮಾತನಾಡಿ ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ಊಟದ ವ್ಯವಸ್ಥೆಯಲ್ಲಿ ಕೊರತೆ ಉಂಟಾಗದಂತೆ ಸರ್ಕಾರ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದೆ. ಸಮ್ಮೇಳನದಲ್ಲಿ ಉಳಿತಾಯಗೊಂಡ ಹಣದಿಂದ ನಿರ್ಮಿಸುತ್ತಿರುವ ಹೆಮ್ಮೆಯ ಕನ್ನಡ ಭವನಕ್ಕೆ ಮಂಡ್ಯ ಜಿಲ್ಲೆಗೆ ಹಾಗೂ ಕನ್ನಡಕ್ಕೆ ಕೊಡುಗೆ ನೀಡಿರುವ ಗಂಗರ ದೊರೆ ಶ್ರೀಪುರುಷ ಅವರ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಮನವಿ ಮಾಡಿದರು.
‘ದೇಶವನ್ನು ನವಗ್ರಹಗಳು ಕಾಡುತ್ತಿವೆ’
‘ನಮ್ಮ ದೇಶವನ್ನು ನವಗ್ರಹಗಳು ಕಾಡುತ್ತಿವೆ. ಇವು ಶಾಸ್ತ್ರ–ಪುರಾಣಗಳಲ್ಲಿ ಬರುವಂಥವಲ್ಲ ಆಧುನಿಕರೆನ್ನುವ ನಾವೇ ನಮ್ಮ ವಿಕೃತ ಮನಸ್ಸುಗಳಿಂದ ಸೃಷ್ಟಿಸಿದಂಥವು. ಅವೆಂದರೆ ವ್ಯಕ್ತಿಚಾರಿತ್ರ್ಯದ ದಾರಿದ್ರ್ಯ ಜಾಗತೀಕರಣದ ಜೂಜು ಹಣ ಮತ್ತು ಅಧಿಕಾರದ ಹುಚ್ಚು ಬುದ್ಧಿಜೀವಿಗಳ ಮೂರ್ಖತನ ನೈಸರ್ಗಿಕ ಸಂಪತ್ತಿನ ದುರ್ಬಳಕೆ ಮತಾಂಧತೆಯ ಮತಿಹೀನತೆ ರಾಜಕೀಯ ವ್ಯವಸ್ಥೆಯ ಅನಾಯಕತ್ವ ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು. ‘ಈ ಅನಿಷ್ಟ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು ಸ್ಥಾನದ ಸೊಕ್ಕು ಸೇಡಿನ ಹಠ ಅಸಹಿಷ್ಣುತೆ ಭಯೋತ್ಪಾದನೆ ಭ್ರಷ್ಟಾಚಾರ ಲೈಂಗಿಕ ಲಾಲಸೆ ವಿಶ್ವಾಸದ್ರೋಹ ಇತ್ಯಾದಿ ಅವಗುಣಗಳೆಲ್ಲ ತುಂಬಿಕೊಂಡು ಬಿಟ್ಟಿವೆ. ನಮ್ಮ ಬದುಕು ಬಾಹ್ಯ ಸನ್ನಿವೇಶದ ಸುಳಿಗೆ ಸಿಲುಕಿ ನೆಮ್ಮದಿ ಎನ್ನುವುದು ಬರಿಯ ಭ್ರಮೆಯಾಗಿದೆ’ ಎಂದು ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.