ನಾಗಮಂಗಲ: ಕನ್ನಡ ಸಾಹಿತ್ಯ ಲೋಕದ ಮೂಲಕ ಕುವೆಂಪು ಅವರು ಹಚ್ಚಿದ ಹಣತೆಯು ನಾಡಿನ ಎಲ್ಲರ ಮನಸ್ಸಲ್ಲೂ ಬೆಳಗುವ ಕೆಲಸವನ್ನು ಮಾಡುತ್ತಿದೆ ಎಂದು ಸಾಹಿತಿ ಎಸ್. ಗಂಗಾಧರಯ್ಯ ಹೇಳಿದರು.
ತಾಲ್ಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಬಿ.ಜಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ‘ಕುವೆಂಪು ಓದು ಕಮ್ಮಟ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕುವೆಂಪು ರೈತನನ್ನು ಯೋಗಿ ಎಂದಿದ್ದಾರೆ. ಸಾಹಿತ್ಯ ಸಂವೇದನೆಯಾಗಿದ್ದು, ವೈಚಾರಿಕತೆ ಬೆಳೆಸಿಕೊಳ್ಳಲು ಕುವೆಂಪು ಅವರ ಓದು ಮುಖ್ಯವಾಗಿದೆ. ಜೊತೆಗೆ ಅವರು ಪರಿಚಯಿಸಿದ ಮಂತ್ರ ಮಾಂಗಲ್ಯವು ಸರಳತೆಗೆ ಹಿಡಿದ ಕೈಗನ್ನಡಿ. ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಹಚ್ಚಿದ ಹಣತೆ ಇಂದು ಎಲ್ಲರ ಮನಸ್ಸಿನಲ್ಲೂ ಬೆಳಗುತ್ತಿದೆ. ಅವರ ಸಾಹಿತ್ಯದಲ್ಲಿ ಕಾಡಿನ ಸೊಬಗು, ಸಾಂದ್ರತೆ ಎಲ್ಲವೂ ಸೇರಿಕೊಂಡಿದೆ. ಜೊತೆಗೆ ಒಡವೆ ಹಳೆಯದಾದರೂ ಅದು ಹೊಸದೆಂಬಂತೆ ಬಳಕೆಯಾಗುವಂತೆ ನಾವು ಸಹ ನಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದರು.
ಆದಿಚುಂಚನಗಿರಿ ವಿವಿಯ ಕುಲಸಚಿವ ಸಿ.ಕೆ.ಸುಬ್ಬರಾಯ ಮಾತನಾಡಿ, ‘ಯುವಕರು ಕುವೆಂಪು ಅವರ ಸಾಹಿತ್ಯ ಓದಬೇಕು. ಬದುಕಿನ ಮಾರ್ಗವನ್ನು ತೋರುವಂತಹ ಸಾಹಿತ್ಯದ ಓದು ಇಂದಿನ ತುರ್ತು ಅವಶ್ಯಕವೂ ಆಗಿದೆ’ ಎಂದರು.
‘ಆದಿಚುಂಚನಗಿರಿ ವಿ.ವಿಯ ಕುಲಪತಿ ಎಂ.ಎ.ಶೇಖರ್ ಅವರು ಕುವೆಂಪು ಅವರ ಸಾಹಿತ್ಯ ಪರಂಪರೆಯಿಂದ ಶೋಧಿಸಿ ನೀಡಿರುವ ಬಳುವಳಿ, ವಿಶ್ವ ಮಾನವನಾಗುವತ್ತ ಮನುಷ್ಯ ರೂಪುಗೊಳ್ಳಲು ಸಾಹಿತ್ಯದ ಓದು, ಇಂತ ಕಮ್ಮಟಗಳ ಆಯೋಜನೆ ಅವಶ್ಯಕ’ ಎಂದರು.
ಕಾರ್ಯಕ್ರಮದಲ್ಲಿ ಕಮ್ಮಟದ ನಿರ್ದೇಶಕ ಸುಭಾಷ್ ರಾಜಮಾನೆ, ಮಾನವಿಕ ಮತ್ತು ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥ ಎ.ಟಿ. ಶಿವರಾಮು, ಪಾಂಶುಪಾಲ ಎನ್.ಆರ್.ರೋಹಿತ್, ಸಹಪ್ರಾಧ್ಯಾಪಕರಾದ ಟಿ.ಎನ್.ವಾಸುದೇವಮೂರ್ತಿ, ಎಚ್.ಶ್ವೇತಾರಾಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.