
ಮಂಡ್ಯ: ‘ಕಟ್ಟಡ ಸಾಮಗ್ರಿ, ಗೃಹೋಪಯೋಗಿ ವಸ್ತುಗಳು ಹಾಗೂ ಉತ್ತರ ಭಾರತದ ಖಾದಿ ಮಾರಾಟ, ಕೃಷಿ ಉಪಕರಣಗಳ ಪ್ರದರ್ಶನ ಮೇಳ ನಡೆಯುತ್ತಿರುವುದರಿಂದ ಜನರಿಗೆ ಹೆಚ್ಚು ಉಪಯುಕ್ತವಾಗಿದೆ’ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ಹೇಳಿದರು.
ನಗರದ ಮಂಡ್ಯ ವಿವಿ ಆವರಣದಲ್ಲಿ ಬಿಲ್ಡ್ 360 ಎಕ್ಸ್ಪೋ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್(ಮಂಡ್ಯ ಕೇಂದ್ರ), ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ (ನ.5 ರಿಂದ 9ರವರೆಗೆ) ಕನ್ನಂಬಾಡಿ ಉತ್ಸವದಲ್ಲಿ ಅವರು ಮಾತನಾಡಿದರು.
ರೈತರಿಗೆ ಅನುಕೂಲವಾಗಲೆಂದು ಹಲವು ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ಅನುಕೂಲವಾಗುವ ಅಮ್ಯೂಸ್‌ಮೆಂಟ್ ಪಾರ್ಕ್ ಆಟಗಳನ್ನು ಪರಿಚಯಿಸಲಾಗುತ್ತಿದೆ. ನಮ್ಮ ಉದ್ದೇಶವೇನೆಂದರೆ ಈ ಕಾವೇರಿ ತೀರದಲ್ಲಿರುವ ಉದ್ಯಮಿಗಳಿಗೆ, ವಾಣಿಜ್ಯೋದ್ಯಮಿಗಳಿಗೆ ಹಾಗೂ ಇತರೆ ಉದ್ಯಮಿಗಳಿಗೆ ಪರಿಚಯಿಸಿ ಬೆಂಬಲ ನೀಡುವುದಕ್ಕೆ ಈ ಮೇಳ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ‘ವಿಶೇಷ ವಿನ್ಯಾಸ ಸೇರಿದಂತೆ ಹಲವು ಬಗೆಯ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಿರುವ ಮಾಹಿತಿ ಹಾಗೂ ಅಗತ್ಯ ವಸ್ತುಗಳು ಸಿಗುವಂತೆ ಕನ್ನಂಬಾಡಿ ಉತ್ಸವದಲ್ಲಿ ಏರ್ಪಡಿಸಲಾಗಿದೆ. ಅದರಂತೆ ಇದರ ಪ್ರಯೋಜನವನ್ನು ಮಂಡ್ಯ ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ್, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಅಧ್ಯಕ್ಷ ನವೀನ್, ಮುಖಂಡರಾದ ಕಾರಸವಾಡಿ ಮಹದೇವ, ಬಸವರಾಜು, ಸಾಗರ್ ಕೋಡಿಶೆಟ್ಟಿಪುರ, ಮಯೂರಗೌಡ, ಶರತ್, ಸೋಮಶೇಖರ್, ಅನಿಲ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.