ADVERTISEMENT

ದಮನಿತರ ಅಭಿವೃದ್ಧಿಗೆ ವಿಶೇಷ ಯೋಜನೆ ಅಗತ್ಯ: ಸತೀಶ ಜಾರಕಿಹೊಳಿ

‘ದಮನಿತರ ಬಂಗಾರದ ದಿನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 6:47 IST
Last Updated 29 ಜುಲೈ 2024, 6:47 IST
ಮಂಡ್ಯ ತಾಲ್ಲೂಕಿನ ಕಾಗೆ ಮಂಟಿ ಗ್ರಾಮದ ಬೋರೇಗುಡ್ಡದ ಚಾರ್ವಾಕ ವೈಚಾರಿಕ ಮಹಾ ಮನೆಯಲ್ಲಿ ಆಯೋಜಿಸಿದ್ದ ‘ದಮನಿತರ ಬಂಗಾರದ ದಿನ’ ಕಾರ್ಯಕ್ರಮದಲ್ಲಿ ಚಂಡೆ ಬಾರಿಸುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು. ಶಾಸಕ ಪಿ.ರವಿಕುಮಾರ್‌ ಇತರರಿದ್ದಾರೆ
ಮಂಡ್ಯ ತಾಲ್ಲೂಕಿನ ಕಾಗೆ ಮಂಟಿ ಗ್ರಾಮದ ಬೋರೇಗುಡ್ಡದ ಚಾರ್ವಾಕ ವೈಚಾರಿಕ ಮಹಾ ಮನೆಯಲ್ಲಿ ಆಯೋಜಿಸಿದ್ದ ‘ದಮನಿತರ ಬಂಗಾರದ ದಿನ’ ಕಾರ್ಯಕ್ರಮದಲ್ಲಿ ಚಂಡೆ ಬಾರಿಸುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು. ಶಾಸಕ ಪಿ.ರವಿಕುಮಾರ್‌ ಇತರರಿದ್ದಾರೆ    

ಮಂಡ್ಯ: ‘ಎಲ್ಲರಿಗೂ ಹಕ್ಕು ಸಿಗಬೇಕು ಎಂದು ಹೋರಾಟ ಮಾಡಿದ ಬುದ್ಧನಿಗೆ ಅವಕಾಶ ಸಿಗಲಿಲ್ಲ, ಅಂತರ್ಜಾತಿ ವಿವಾಹ ಮಾಡಲು ಬಸವಣ್ಣ ಮುಂದಾದ ಸಂದರ್ಭದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಯಿತು. ದೇಶದಲ್ಲಿ ಸಮ ಸಮಾಜ ನಿರ್ಮಾಣಕ್ಕೆಂದು ಮುಂದಾದ ಅಂಬೇಡ್ಕರ್ ಅವರಿಗೆ ನೋವು ನೀಡಿದರು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಿಷಾದಿಸಿದರು.

ಚಾರ್ವಾಕ ವೈಚಾರಿಕ ಮಹಾಮನೆ ಸಂಸ್ಥೆಯಿಂದ ತಾಲ್ಲೂಕಿನ ಕಾಗೆ ಮಂಟಿ ಗ್ರಾಮದ ಬೋರೇಗುಡ್ಡದ ಚಾರ್ವಾಕ ವೈಚಾರಿಕ ಮಹಾ ಮನೆಯಲ್ಲಿ ಭಾನುವಾರ ನಡೆದ ‘ದಮನಿತರ ಬಂಗಾರದ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹನೀಯರ ಇತಿಹಾಸವನ್ನು ಅರಿತು ಅವರಂತೆ ನಡೆಯಬೇಕಿದೆ. ದಮನಿತರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸಬೇಕು. ಈ ನಿಟ್ಟಿನಲ್ಲಿ ಚಾರ್ವಾಕ ವೈಚಾರಿಕ ಸಂಸ್ಥೆ ಪ್ರಯೋಗಶೀಲ ಪ್ರಯತ್ನ ಮಾಡುತ್ತಿದೆ. ಅವರ ಜೊತೆಗೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕು’ ಎಂದು ಕರೆ ನೀಡಿದರು.

ADVERTISEMENT

‘ಪ್ರತಿ ಮನೆ ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು. ಇದಕ್ಕೂ ಮುನ್ನ ಮಹಾನ್ ನಾಯಕರ ಇತಿಹಾಸವನ್ನು ತಿಳಿದು ಮೈಗೂಡಿಸಿಕೊಳ್ಳುವುದೇ ನಮ್ಮ ಸಾಧನೆಯಾಗಬೇಕು. ಅವಕಾಶಗಳು ಸಿಕ್ಕ ಸಂದರ್ಭ ಎಲ್ಲರ ಸಹಕಾರ ಪಡೆದು ಅದನ್ನು ಕಾರ್ಯರೂಪಕ್ಕೆ ತರಬೇಕು. ಎಲ್ಲಿಯವರೆಗೆ ಸಹಕಾರ ಸಿಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಯಶಸ್ವಿಯಾಗುವುದಿಲ್ಲ, ಸೌಲಭ್ಯಕ್ಕಾಗಿಯೇ ನಿರಂತರ ಹೋರಾಟ ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಸಂಸ್ಥೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ನಮ್ಮ ಸಹಕಾರ ಇರುತ್ತದೆ. ಜೊತೆಗೆ ಸ್ಥಳೀಯ ಶಾಸಕರು ಸಹ ಇದ್ದಾರೆ. ಅಲ್ಲದೆ ಸರ್ಕಾರದ ವತಿಯಿಂದ ಅಗತ್ಯವಾಗಿರುವ ಸೌಲಭ್ಯಗಳನ್ನು ಖಂಡಿತವಾಗಿ ಕೊಡಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಕೆಳಮಟ್ಟದ ಕೆಲವು ಸಮುದಾಯಗಳು ಶೋಷಣೆಗೆ ಒಳಗಾಗಿದ್ದು, ಆ ಸಮುದಾಯದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಚಾರ್ವಾಕ ಸಂಸ್ಥೆಯವರು ಉತ್ತಮ ಕೆಲಸ ಮಾಡಲು ಹೊರಟಿದ್ದಾರೆ. ನಮಗೂ ಅವಕಾಶ ಸಿಕ್ಕಿದ್ದು, ಸಮಾಜ ಬದಲಾವಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಗುರಿ ಹೊಂದೋಣ’ ಎಂದು ಮನವಿ ಮಾಡಿದರು.

ಶಾಸಕ ಪಿ.ರವಿಕುಮಾರ್‌, ಮುಡಾ ಅಧ್ಯಕ್ಷ ನಹೀಂ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ನಿವೃತ್ತ ಎಂಜಿನಿಯರ್ ಚಂದ್ರಹಾಸ, ಬೌದ್ಧ ಬಿಕ್ಕು ಮನೋರಕ್ಕಿತ ಬಂತೇಜಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದೇವರಾಜು ಕೊಪ್ಪ, ಚಾರ್ವಾಕ ಸಂಸ್ಥೆ ಅಧ್ಯಕ್ಷ ಮಾಚಹಳ್ಳಿ ಗಿರೀಶ್, ಮುಖಂಡರಾದ ಮಾಚಹಳ್ಳಿ ಪರಮೇಶ್, ರಾಮಚಂದ್ರಪ್ಪ ಭಾಗವಹಿಸಿದ್ದರು.

ರಂಗಕರ್ಮಿ ಗಿರೀಶ್‌ ಮಾಚಹಳ್ಳಿ ರಚನೆ ಮತ್ತು ನಿರ್ದೇಶನದ ಮನಸ್ಮೃತಿ ಮತ್ತು ಭಾರತ ಸಂವಿಧಾನ ನಾಟಕವನ್ನು ಚಾರ್ವಾಕ ವೈಚಾರಿಕ ತಂಡದವರು ಪ್ರದರ್ಶಿಸಿದರು

Highlights - ಶೋಷಣೆಗೆ ಒಳಗಾದ ಸಮುದಾಯಗಳಿಗೆ ಶಕ್ತಿ ಮಹಾನ್ ನಾಯಕರ ಇತಿಹಾಸ ಅರಿಯಿರಿ ಪ್ರತಿ ಮನೆ ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.