ADVERTISEMENT

ಮಂಡ್ಯ: ಮಳೆಯಿಂದ ತಗ್ಗು ಪ್ರದೇಶಗಳ ಜನಜೀವನ ಅಸ್ತವ್ಯಸ್ತ

ಹಾಲಹಳ್ಳಿ ಕೊಳೆಗೇರಿ, ಬೀಡಿ ಕಾರ್ಮಿಕರ ಕಾಲೊನಿಯ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 13:33 IST
Last Updated 30 ಸೆಪ್ಟೆಂಬರ್ 2020, 13:33 IST
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀಡಿ ಕಾರ್ಮಿಕರ ಕಾಲೊನಿಯ ರಸ್ತೆ ಕೆಸರುಮಯವಾಗಿರುವುದು
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀಡಿ ಕಾರ್ಮಿಕರ ಕಾಲೊನಿಯ ರಸ್ತೆ ಕೆಸರುಮಯವಾಗಿರುವುದು   

ಮಂಡ್ಯ: ಮಂಗಳವಾರ, ಬುಧವಾರ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳ ಜನರ ಜೀವನ ಅಸ್ತವ್ಯಸ್ತಗೊಂಡಿತ್ತು. ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ಆತಂಕದಲ್ಲೇ ದಿನ ಕಳೆಯಬೇಕಾಯಿತು.

ಕೆರೆಯಂಗಳದಲ್ಲಿರುವ ಬೀಡಿ ಕಾರ್ಮಿಕರ ಕಾಲೊನಿ, ಹಾಲಹಳ್ಳಿ ಕೊಳೆಗೇರಿಯ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಗಳಂತಾಗಿದ್ದು, ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು ಮನೆಯಿಂದ ಹೊರಗೆ ತೆರಳಲು ಸಾಧ್ಯವಿಲ್ಲದಾಗಿದೆ. ಮಕ್ಕಳು, ವಯೋವೃದ್ಧರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ಬೀಡಿ ಕಾರ್ಮಿಕರ ಕಾಲೊನಿಯ ಬಹುತೇಕ ನಿವಾಸಿಗಳು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇರುವ ಜಾಗದಲ್ಲೇ ಚಿಕ್ಕದಾದ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಮಳೆ ಯಾಕಾದರೂ ಬರುತ್ತದೋ ಎಂಬ ಭಯದಲ್ಲೇ ದಿನ ದೂಡುವಂತಾಗಿದೆ. ಮಳೆಯ ಕಾರಣದಿಂದ ರಸ್ತೆಗಳು ಜಾರುಬಂಡಿಯಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಅಂಗಡಿ, ಮೆಡಿಕಲ್‌ ಸ್ಟೋರ್‌ಗಳಿಗೆ ತೆರಳಲಾಗದೆ ಜನರು ಪರದಾಡುವಂತಾಗಿದೆ.

ADVERTISEMENT

‘ನಾನು ಮಾತ್ರೆ ತೆಗೆದುಕೊಳ್ಳಬೇಕಿಕು, ಆದರೆ ರಸ್ತೆ ಹದಗೆಟ್ಟ ಕಾರಣ ಹೊರಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು 1ನೇ ಕ್ರಾಸ್‌ ನಿವಾಸಿ ಫಯಾಜ್‌ ಖಾನ್‌ ತಮ್ಮ ಅಳಲು ತೋಡಿಕೊಂಡದರು.

ಬೀಡಿ ಕಾರ್ಮಿಕರು ಕಾಲೊನಿಯಲ್ಲಿನ ಮೈದಾನವು ಮಳೆ ನೀರಿನಿಂದಾಗಿ ಅಕ್ಷರಶಃ ಕೆರೆಯಂತಾಗಿದೆ. ಬೈಕ್‌ ಸವಾರರು ಜಾರಿ ಬೀಳುತ್ತಿದ್ದಾರೆ. 1ನೇ, 3ನೇ ಕ್ರಾಸ್‌, ಮಸೀದಿ ಪ್ರದೇಶ ಸೇರಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅದನ್ನು ತೆಗೆದು ಹಾಕುವ ಕೆಲಸದಲ್ಲಿ ನಿರತರಾಗಿದ್ಧಾರೆ. ಮಂಗಳವಾರ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.

‘ಒಳಚರಂಡಿಗಳ ಪೈಪ್‌ಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆಗಳಿಗೆ ನೀರು ನುಗ್ಗಿದೆ. ಎಲ್ಲೆಲ್ಲೂ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಈಗಲೂ ಮನೆಯ ಮುಂದೆ ಕೊಳಚೆ ನೀರು ನಿಂತಿದ್ದು, ಏನೂ ಕೆಲಸ ಮಾಡದಂತಾಗಿದೆ’ ಎಂದು 3ನೇ ಕ್ರಾಸ್‌ ನಿವಾಸಿ ರಫಿಯಾ ಬೇಗಂ ನೋವು ವ್ಯಕ್ತಪಡಿಸಿದರು.

ನಗರದ ಹಾಲಹಳ್ಳಿ ಬಡಾವಣೆಯ ಶೆಡ್‌ಗಳಿಗೂ ನೀರು ನುಗ್ಗಿದ್ದ ಮಂಗಳವಾರ ರಾತ್ರಿಯಿಡೀ ಪರದಾಡಿದ್ದಾರೆ. ಬುಧವಾರ ಕೂಡ ಸುರಿದ ಮಳೆಯಿಂದಾಗಿ ಅವರ ಬದುಕು ಅಸ್ತವ್ಯಸ್ತಗೊಂಡಿದೆ. ನಿವಾಸಿಗಳು ನೀರಿನ ಟ್ಯಾಂಕ್‌ಗಳ ಕೆಳಗೆ ರಾತ್ರಿ ಕಳೆದಿದ್ದಾರೆ.

ಈಗಾಗಲೇ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 632 ಮನೆಗಳನ್ನು ನಿರ್ಮಾಣ ಮಾಡಿದ್ದು ನಿವಾಸಿಗಳಿಗೆ ಹಂಚಿಕೆ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊಳೆಗೇರಿ ನಿವಾಸಿಗಳ ಸಮಸ್ಯೆ ಅರಣ್ಯ ರೋದನವಾಗಿದೆ. ಅಲ್ಲದೆ ತಾತ್ಕಾಲಿಕವಾಗಿ ನಿರ್ಮಿಸಿರುವ ತಗಡು ಮನೆಗಳು ಶಿಥಿಲಗೊಂಡಿದ್ದು, ಮಳೆಯಿಂದಾಗಿ ಸೋರುತ್ತಿವೆ. ಇನ್ನಾದರೂ ಮನೆಗಳ ಹಸ್ತಾಂತರ ಮಾಡುವವರೆಗೆ ಶೆಡ್‌ ದುರಸ್ತಿ ಮಾಡಿಕೊಡಬೇಕು ಎಂದು ಅಲ್ಲಿಯ ನಿವಾಸಿಗಳು ಒತ್ತಾಯಿಸಿದರು.

ಸಾಂಕ್ರಾಮಿಕ ರೋಗಗಳ ಭೀತಿ

ಹಾಲಹಳ್ಳಿ, ಬೀಡಿಕಾರ್ಮಿಕರ ಕಾಲೊನಿಯಲ್ಲಿ ಕೊಳಚೆ ನೀರು ರಸ್ತೆಯಲ್ಲಿ ಹರಿದಿದ್ದು ಎಲ್ಲೆಲ್ಲೂ ದುರ್ವಾಸನೆ ಬೀರುತ್ತಿದೆ. ರಸ್ತೆಗಳು ಸೊಳ್ಳೆಗಳ ಆವಾಸಸ್ಥಾನವಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ರಸ್ತೆ ತುಂಬೆಲ್ಲ, ಕಸ ಕಡ್ಡಿ, ಹಳೆಯ ಚಪ್ಪಲಿಗಳು ಬಿದ್ದು ಚೆಲ್ಲಾಡುತ್ತಿದ್ದು ಸ್ವಚ್ಛತೆ ಕಾಣದಾಗಿದೆ.

‘ನಗರಸಭೆ ವತಿಯಿಂದ ಕೂಡಲೇ ಬೀಡಿ ಕಾರ್ಮಿಕರ ಕಾಲೊನಿಯ ರಸ್ತೆಗಳನ್ನು ಸ್ವಚ್ಛಗೊಳಿಸಬೇಕು. ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮಾಡುತ್ತಿಲ್ಲ. ಇದರಿಂದ ಇಡಿ ಬಡಾವಣೆಯಲ್ಲಿ ರೋಗಭೀತಿ ಎದುರಾಗಿದೆ’ ಎಂದು 3ನೇ ವಾರ್ಡ್‌ ನಗರಸಭಾ ಸದಸ್ಯ ಜಾಕೀರ್‌ ಪಾಷಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.