ADVERTISEMENT

ಮಾದೇಗೌಡರಿಗೆ ‘ಕರ್ನಾಟಕ ರತ್ನ' ನೀಡುವಂತೆ ಸರ್ಕಾರಕ್ಕೆ ಆಗ್ರಹ–ಪ್ರದೀಪ್‌ ಈಶ್ವರ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 2:31 IST
Last Updated 19 ಸೆಪ್ಟೆಂಬರ್ 2025, 2:31 IST
ಭಾರತೀನಗರದ ಭಾರತೀ ಎಜುಕೇಷನ್ ಟ್ರಸ್ಟ್ ಆಯೋಜಿಸಿರುವ ಭಾರತೀ ಉತ್ಸವ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್  ಚಾಲನೆ ನೀಡಿದರು.
ಭಾರತೀನಗರದ ಭಾರತೀ ಎಜುಕೇಷನ್ ಟ್ರಸ್ಟ್ ಆಯೋಜಿಸಿರುವ ಭಾರತೀ ಉತ್ಸವ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್  ಚಾಲನೆ ನೀಡಿದರು.   

ಭಾರತೀನಗರ : ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಹಿರಿಯ ಮುತ್ಸದ್ಧಿ ಜಿ.ಮಾದೇಗೌಡರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸುವುದಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕಪ್ರದೀಪ್‌ ಈಶ್ವರ್‌ ಹೇಳಿದರು.

ಇಲ್ಲಿಯ ಭಾರತೀ ಎಜುಕೇಷನ್‌ ಟ್ರಸ್ಟ್‌ ಆಯೋಜಿಸಿರುವ ಭಾರತೀ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿ.ಮಾದೇಗೌಡ ಅವರ ಶ್ರಮಕ್ಕೆ ಇಂತಹ ಪ್ರಶಸ್ತಿಗಳನ್ನು ನೀಡಿದರೆ ಅವುಗಳ ತೂಕವೂ ಹೆಚ್ಚುತ್ತದೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿ, 1975ರಲ್ಲಿ ಸುಳ್ಯದ ಕಾಲೇಜಿನಲ್ಲಿ ಧ್ಯಾಪಕನಾಗಿದ್ದ ವೇಳೆ ಜಿ.ಮಾದೇಗೌಡರನ್ನು ಭೇಟಿಯಾಗುವ ಸಲುವಾಗಿ ಮಂಡ್ಯಕ್ಕೆ ವೆಂಕಟರಮಣಗೌಡ ಅವರೊಡನೆ ಬಂದಿದ್ದು, ಕಡಿಮೆ ಅಂಕ ಗಳಿಸಿದವರಿಗೆ ಇಲ್ಲಿಯ ಕಾಲೇಜಿನಲ್ಲಿ ಮೊದಲು ಪ್ರವೇಶ ನೀಡುವ ಬಗ್ಗೆ ಅಂದು ಮಾದೇಗೌಡ ಅವರ ಮಾತು ಸ್ಮರಣೀಯ ಎಂದರು.

ADVERTISEMENT

ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್‌ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿ.ಮಾದೇಗೌಡ ತಾತ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಕಾವೇರಿ ಹೋರಾಟದ ಮೂಲಕ ನೆಲ, ಜಲ, ಭಾಷೆ ರಕ್ಷಣೆಗೆ ನಿಂತವರು. ಜಿಲ್ಲೆಯಲ್ಲಿ ಗಾಂಧಿ ಭವನ, ಗಾಂಧಿ ಗ್ರಾಮ ನಿರ್ಮಾಣಕ್ಕೆ ಮುನ್ನುಡಿ ಬರೆದವರು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬುದಕ್ಕೆ ನನ್ನ ಸಹಮತ ಇದೆ ಎಂದರು.

ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ,   ಪ್ರದೀಪ್‌ ಈಶ್ವರ್‌ , ರವಿಕುಮಾರ್‌ಗೌಡ(ಗಣಿಗ)  ಇಬ್ಬರಿಗೂ ಸಚಿವ ಸ್ಥಾನ ಸಿಗಲಿ ಎಂದು ಆಶಿಸಿದರು.

ನಟಿ ರಾಗಿಣಿ ದ್ವಿವೇದಿ, ಬಿಇಟಿ ಸಿಇಒ ಆಶಯ್‌ಮಧು,   ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಟ್ರಸ್ಟಿಗಳಾದ ಮುದ್ದಯ್ಯ, ಎಸ್‌.ಜಯರಾಮು, ಅಂಗಸಂಸ್ಥೆಗಳ ಮುಖ್ಯಸ್ಥರಾದ ಎಸ್‌. ನಾಗರಾಜು, ತಮೀಜ್‌ಮಣಿ, ಸುರೇಶ್‌, ಮಲ್ಲಿಕಾರ್ಜುನಯ್ಯ, ಜಿ.ಕೃಷ್ಣ, ಆಡಳಿತಾಧಿಕಾರಿ ಜವರೇಗೌಡ, ಡಾ.ಎಂ.ಎಸ್‌.ಮಹದೇವಸ್ವಾಮಿ, ಡಾ.ಚಂದನ್‌, ರಾಜೇಂದ್ರರಾಜೇ ಅರಸ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.