ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಬಳಿ, ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಕೆಆರ್‌ಎಸ್ ಆಸುಪಾಸಿನ ಗ್ರಾಮಗಳ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ಆಗ್ರಹಿಸಿದರು.
ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ನಡೆಯುವಂತಾದರೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದ್ದು, ಸರ್ಕಾರಕ್ಕೆ ಆದಾಯವೂ ಬರುತ್ತದೆ. ಕೆಆರ್‌ಎಸ್ ಸುತ್ತಮುತ್ತ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ. ಈ ಯೋಜನೆಗಳನ್ನು ವಿರೋಧಿಸುತ್ತಿರುವವರು ವಾಸ್ತವ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು. ಸರ್ಕಾರ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಬೆಳಗೊಳ ಗ್ರಾ.ಪಂ. ಅಧ್ಯಕ್ಷ ಬಿ. ರವಿಕುಮಾರ್ ಮಾತನಾಡಿ, ‘ರೈತಸಂಘ ಮತ್ತು ಇತರ ಸಂಘಟನೆಗಳು ವಿನಾ ಕಾರಣ ಈ ಯೋಜನೆಗಳನ್ನು ವಿರೋಧಿಸುತ್ತಿವೆ. ಅಣೆಕಟ್ಟೆ ಮತ್ತು ಬೃಂದಾವನ ಇರುವುದರಿಂದ ಸಹಸ್ರಾರು ಪ್ರವಾಸಿಗರು ಕೆಆರ್‌ಎಸ್‌ಗೆ ಭೇಟಿ ನೀಡುತ್ತಿದ್ದಾರೆ. ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗಳು ಕಾರ್ಯಗತವಾದರೆ ಈ ಸ್ಥಳ ಮತ್ತಷ್ಟು ಪ್ರಸಿದ್ಧ ಪಡೆಯಲಿದೆ’ ಎಂದರು.
ತಾ.ಪಂ. ಮಾಜಿ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ವಿ. ಸುರೇಶ್, ಪುಟ್ಟರಾಜು, ಸದಸ್ಯರಾದ ರಜಿನಿ, ಆರ್ಮುಗಂ, ಮುಖಂಡರಾದ ಡಿ. ಜಗದೀಶ್, ಎನ್. ಪುನೀತ್, ಪ್ರತಾಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.