ADVERTISEMENT

ಅ.3ರಂದು ವಿಜಯಶಂಕರ್‌ಗೆ ‘ಕಾವೇರಿ ಪ್ರಶಸ್ತಿ’ ಪ್ರದಾನ

ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:54 IST
Last Updated 21 ಸೆಪ್ಟೆಂಬರ್ 2025, 4:54 IST
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಸೆ.22ರಿಂದ ನಡೆಯುವ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಆಶ್ರಮದಲ್ಲಿ ಶನಿವಾರ ನಡೆದ ಸಭೆಯಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿದರು
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಸೆ.22ರಿಂದ ನಡೆಯುವ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಆಶ್ರಮದಲ್ಲಿ ಶನಿವಾರ ನಡೆದ ಸಭೆಯಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿದರು   

ಶ್ರೀರಂಗಪಟ್ಟಣ: ‘ನವರಾತ್ರಿ ಸಂದರ್ಭದಲ್ಲಿ ಚಂದ್ರವನ ಆಶ್ರಮದಿಂದ ಕೊಡಮಾಡುವ ರಾಷ್ಟ್ರ ಮಟ್ಟದ ‘ಕಾವೇರಿ ಪ್ರಶಸ್ತಿ’ಗೆ ಈ ಬಾರಿ ಮೇಘಾಲಯ ರಾಜ್ಯಪಾಲ ಸಿ.ಎಚ್‌. ವಿಜಯಶಂಕರ್‌ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಆಶ್ರಮದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಶಸ್ತಿ ಆಯ್ಕೆ ಸಮಿತಿಯು ಸಿ.ಎಚ್‌. ವಿಜಯಶಂಕರ್‌ ಅವರನ್ನು ರಾಷ್ಟ್ರ ಮಟ್ಟದ ಕಾವೇರಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಅ.3ರಂದು ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಅವರು ಹೇಳಿದರು.

ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್‌ ಮಾತನಾಡಿ, ‘ಸೆ.22ರಂದು ನವರಾತ್ರಿ ಆಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಅಂದು ಬೆಳಿಗ್ಗೆ 8.30ಕ್ಕೆ ತುಮಕೂರು ಜಿಲ್ಲೆ ಶ್ವೇತ ಬೆಳ್ಳಾವಿ ಮಠದ ಶ್ರೀ ಕಾರದ ಮಠದ ವೀರ ಬಸವ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್‌ ನೀಲಪ್ಪ ಶಿವಣ್ಣನವರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸೆ.22ರಿಂದ ಅ.3ರ ವರೆಗೆ ತ್ರಿನೇತ್ರ ಶ್ರೀಗಳು ಮೌನಾನುಷ್ಠಾನ ಮಾಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಅ.1ರಂದು ಪೂರ್ಣಾಹುತಿ, ಅ.2ರಂದು ಬನ್ನಿಪೂಜೆ, ರಥೋತ್ಸವ, ಗೋಪೂಜೆ ಹಾಗೂ ಸಾಂಸ್ಕೃತಿಕ ಕಶರ್ಯಕ್ರಮಗಳು ನಡೆಯಲಿವೆ. ಅ.3ರಂದು ಸಮಾರೋಪ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಜಿ.ಟಿ. ದೇವೇಗೌಡ, ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು ಭಾಗವಹಿಸಲಿದ್ದಾರೆ’ ಎಂದರು. ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಶೇಖರ್‌ ಕುಂಬಾರ್‌, ಸೋಮಶೇಖರ್‌ ಇದ್ದರು.

‘2500 ಮಹಿಳೆಯರಿಗೆ ಮಡಿಲಕ್ಕಿ’

‘ಅ.3ರಂದು ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಜನಸ್ನೇಹಿ ವೈದ್ಯ ಡಾ.ರಾಮಕೃಷ್ಣಯ್ಯ ಸಾವಯವ ಕೃಷಿಕ ಎಂ.ಸಿ. ಚಂದ್ರೇಗೌಡ ಉದ್ಯಮಿ ವೈ. ಎಸ್‌.ಮಹದೇವ್ ತಾಂತ್ರಿಕ ಕ್ಷೇತ್ರದ ಸಾಧಕ ಮಹದೇವಯ್ಯ ರಾಜಕೀಯ ಸೇವಾ ಕ್ಷೇತ್ರದ ಬಿ.ಎಚ್. ಬನ್ನಿಕೋಡ್‌ ಅವರಿಗೆ ‘ಕಾಯಕ ಯೋಗಿ ಸೇವಾ ಧುರೀಣ ಪ್ರಶಸ್ತಿ’ ನೀಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ 2500 ಮಹಿಳೆಯರಿಗೆ ಮಡಿಲಕ್ಕಿ ವಿತರಣೆ ನಡೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.