ಮದ್ದೂರು: ತಾಲ್ಲೂಕಿನ ಅರುವನಹಳ್ಳಿಯಲ್ಲಿ ನೆಲೆಸಿದ್ದ ಕೀರ್ತಿರಾಜರ ನೂತನ ದೇವಸ್ಥಾನವು ಜೂನ್ 1ರಂದು ಲೋಕಾರ್ಪಣೆಗೊಳ್ಳಲಿದೆ.
ತಾಲ್ಲೂಕಿನ ಕೊಕ್ಕರೆ ಬಳ್ಳೂರು ಬಳಿಯ ಅರುವನಹಳ್ಳಿಯ ಶ್ರೀ ಕೀರ್ತಿ ರಾಜರ ದೇವಸ್ಥಾನವನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಲೋಕಾರ್ಪಣೆಗೊಳಿಸಲಿದ್ದು, ಶ್ರೀರಂಗ ಪಟ್ಟಣದ ಭಾನುಪ್ರಕಾಶ್ ಶರ್ಮಾ ಹಾಗೂ ಲಕ್ಷ್ಮೀಶ ಶರ್ಮಾ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
‘ಕರುನಾಡಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ಹಾಗೆ ಗತವೈಭವದ ಆಡಳಿತ ನಡೆಸಿದ ವಿಜಯನಗರ ಸಾಮ್ರಾಜ್ಯದ ಮೇಲೆ ಮೊಗಲರು ದಾಳಿ ಮಾಡಿದ ವೇಳೆ ಆಗ ಆಳ್ವಿಕೆ ನಡೆಸುತ್ತಿದ್ದ ರಾಜ ಪರಿವಾರದ ಕೀರ್ತಿರಾಜರು ಇಲ್ಲಿಗೆ ವಲಸೆ ಬಂದಿದ್ದರು. ದಾಳಿ ನಡೆಯುವಾಗ ಸ್ತ್ರೀಯರ ಮಾನ, ಪ್ರಾಣ ರಕ್ಷಣೆಗಾಗಿ ಹಂಪೆಯ ಗುಪ್ತ ಮಾರ್ಗದ ಮೂಲಕ ಕೀರ್ತಿ ರಾಜರು ತನ್ನ ಪತ್ನಿ ಪುಷ್ಪಲತಾ ರಾಣಿ ಹಾಗೂ ಸಾವಿರಾರು ಮಂದಿಯೊಂದಿಗೆ ಆನೆ, ಕುದುರೆಗಳನ್ನು ಏರಿ ಬಂದು ನೆಲೆಸಿದರು’ ಎಂದು ಅವರ ವಂಶಸ್ಥರು ಹೇಳುತ್ತಾರೆ.
‘ವಿಷಯ ತಿಳಿದ ಮೈಸೂರು ಅರಸರು ಕೀರ್ತಿ ರಾಜರಿಗೆ ಸುಮಾರು 54 ಹಳ್ಳಿಗಳನ್ನು ಒಳಗೊಂಡಂತೆ 1,800 ಎಕರೆಗೂ ಹೆಚ್ಚು ಭೂಮಿಯನ್ನು ಕೊಟ್ಟಿದ್ದರು ಎನ್ನಲಾಗಿದ್ದು, ಈಗಿನ ಅರುವನಹಳ್ಳಿಯು ಆಗ ಅರುನಾಥ ಪಟ್ಟಣವಾಗಿತ್ತು. ಕ್ರಮೇಣ ಅರಿವಿನಹಳ್ಳಿ ಎಂದು ಹೆಸರಾಯಿತು’ ಎಂದು ಇಲ್ಲಿನ ಹಿರಿಯರು ಹೇಳಿದರು.
‘ಕೀರ್ತಿ ರಾಜರ ಬಾಮೈದ ವಿದ್ಯಾರಾಜರು ಕೀರ್ತಿ ರಾಜರ ಹಾಗೆಯೇ ಮಾಗಡಿ ಬಳಿಯ ಗಜತಾನ ಗುಪ್ಪೆಗೆ (ಈಗಿನ ಗೆಜ್ಜೆಗಾರ ಗುಪ್ಪೆ ) ಬಂದು ನೆಲೆಸಿದರು ಎಂದು ಹೇಳಲಾಗಿದ್ದು, 5000 ಎಕರೆ ಜಮೀನನ್ನು ಮೈಸೂರು ರಾಜರು ನೀಡಿದ್ದರು’ ಎಂದು ಕೀರ್ತಿ ರಾಜರ ವಂಶಸ್ಥರಾದ ಶಿಕ್ಷಕ ಕೃಷ್ಣ ರಾಜೇ ಅರಸ್ ತಿಳಿಸಿದರು.
ಕಾಲ ಕಳೆದಂತೆ ಕೀರ್ತಿ ರಾಜರು ಸಾವನ್ನಪ್ಪಿದ ಸ್ಥಳದಲ್ಲಿ ಅವರ ಬಗ್ಗೆ ಕೆತ್ತಿದ್ದ ಶಾಸನವನ್ನು ಇಟ್ಟು ಚಿಕ್ಕದಾಗಿ ಮಂಟಪ ನಿರ್ಮಿಸಿದ್ದು, ಅವರು ಸಾವನ್ನಪ್ಪಿದ ಸ್ಥಳದಲ್ಲಿ ಇದ್ದ ಶಾಸನಕ್ಕೆ ಪ್ರತೀ ವರ್ಷ ಪೂಜೆಯನ್ನು ಸಲ್ಲಿಸಲಾಗುತ್ತಿತ್ತು. ಅದೇ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿ ನೂತನವಾಗಿ ದೇವಸ್ಥಾನವನ್ನು ಅವರ ವಂಶಸ್ಥರು ಸೇರಿ ದಾನಿಗಳ ನೆರವಿನೊಂದಿಗೆ ಗ್ರಾಮದ ಮುಖಂಡರಾದ ಶ್ರೀನಿವಾಸ ಗೌಡ ಹಾಗೂ ಕೀರ್ತಿ ರಾಜರ ವಂಶಸ್ಥ ಕೃಷ್ಣ ರಾಜೇ ಅರಸ್ ಅವರ ನೇತೃತ್ವದಲ್ಲಿ ನಿರ್ಮಿಸಿದ್ದು, ಪ್ರತಿನಿತ್ಯ ಪೂಜೆ ನಡೆಸಲು ಏರ್ಪಾಡು ಮಾಡಿದ್ದಾರೆ.
ಈ ಶಾಸನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಬಿಂಬಿಸುವ ಸೂರ್ಯ, ಚಂದ್ರ, ಆನೆ, ಕುದುರೆಗಳನ್ನು ಮೊದಲು ಕೆತ್ತಲಾಗಿದ್ದು, ನಂತರ ಕೀರ್ತಿ ರಾಜರ ಕೆತ್ತನೆ ಇದೆ. ಅದರ ಕೆಳಗೆ ಅವರ ಬಗ್ಗೆ ಕೆತ್ತಲಾಗಿದೆ. ಮುಂದಿನ ದಿನಗಳಲ್ಲಿ ಶಾಸನಕ್ಕೆ ನಿತ್ಯವೂ ಪೂಜೆ ನಡೆಯುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.