ADVERTISEMENT

ಅಭಿವೃದ್ಧಿಗೆ ಮಾದರಿ ರೂಪಿಸಿದ ಕೆಂಪೇಗೌಡರು

ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ; ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 11:56 IST
Last Updated 29 ಅಕ್ಟೋಬರ್ 2022, 11:56 IST
ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ ಹಾಗೂ ಥೀಮ್‌ ಪಾರ್ಕ್‌ ನಿರ್ಮಾಣದ ಅಂಗವಾಗಿ ಮಂಡ್ಯದ ಕಾಳಿಕಾಂಬ ದೇವಾಲಯದ ಆವರಣದಲ್ಲಿ  ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು
ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ ಹಾಗೂ ಥೀಮ್‌ ಪಾರ್ಕ್‌ ನಿರ್ಮಾಣದ ಅಂಗವಾಗಿ ಮಂಡ್ಯದ ಕಾಳಿಕಾಂಬ ದೇವಾಲಯದ ಆವರಣದಲ್ಲಿ  ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು   

ಮಂಡ್ಯ: ‘ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದರು. ಅಭಿವೃದ್ಧಿಗೆ ಬಲುದೊಡ್ಡ ಮಾದರಿ ರೂಪಿಸಿದರು. ಅವರು ಕಟ್ಟಿದ ಬೆಂಗಳೂರು ಈಗ ಕೋಟ್ಯಂತರ ಜನರಿಗೆ ಬದುಕು, ಉದ್ಯೋಗ ಕೊಟ್ಟಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ ಹಾಗೂ ಥೀಮ್‌ ಪಾರ್ಕ್‌ ನಿರ್ಮಾಣದ ಅಂಗವಾಗಿ ನಗರದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾಡಪ್ರಭು ಕೆಂಪೇಗೌಡ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಎಲ್ಲಾ ಸಮುದಾಯ ಹಾಗೂ ಎಲ್ಲಾ ಕಸುಬುಗಳಿಗೆ ಬೆಂಗಳೂರಿನಲ್ಲಿ ಮಾರುಕಟ್ಟೆ ಕಲ್ಪಿಸಿಕೊಟ್ಟರು. ಅವರು ಸಮಾಜದ ಎಲ್ಲಾ ವರ್ಗಕ್ಕೂ ಮಾದರಿಯಾಗಿದ್ದಾರೆ. ಅವರ ಸೇವೆಯ ಸ್ಮರಣೆಗಾಗಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ’ ಎಂದರು.

ADVERTISEMENT

‘ಮೃತ್ತಿಕೆ ಸಂಗ್ರಹ ರಥವು ನ.6ರವರೆಗೆ ಜಿಲ್ಲೆಯ 233 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1500ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಂಚರಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ವ್ಯಾಪ್ತಿಯಲ್ಲಿರುವ ಧಾರ್ಮಿಕ, ಪಾರಂಪರಿಕ, ಕಲ್ಯಾಣಿ ಇನ್ನಿತರ ಪ್ರಸಿದ್ಧ ಸ್ಥಳದಲ್ಲಿ ಮಣ್ಣು ಸಂಗ್ರಹಿಸಿ ಸಮರ್ಪಿಸಬೇಕು’ ಎಂದರು.

‘ಕೆಂಗಲ್ ಹನುಮಂತಯ್ಯನವರ ಉದಾರತೆಯಿಂದ ವಿಧಾನಸೌಧ ನಿರ್ಮಾಣವಾಗಿ ಬೆಂಗಳೂರು ಖ್ಯಾತಿ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಪ್ರಭು ಕೆಂಪೇಗೌಡ ಅವರಿಗೆ ವಿಶೇಷ ಗೌರವ ಸಲ್ಲಿಸಬೇಕು ಎನ್ನುವ ದೂರದೃಷ್ಟಿಯಿಂದ ರಾಜ್ಯದೆಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹಿಸಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ’ ಎಂದರು.

‘700 ವರ್ಷಗಳ ಹಿಂದೆ ನಾಡು ಕಟ್ಟಿದ ಕೆಂಪೇಗೌಡರಂತಹ ದೊರೆಗೆ ಗೌರವ ಸಲ್ಲಿಸಲು ಜಾತಿ-ಮತ, ಪಕ್ಷ ಬೇಧವಿಲ್ಲದೇ ಎಲ್ಲರೂ ಬೆಂಬಲಿಸಬೇಕು. ಹಳ್ಳಿಗಳಲ್ಲಿ ಸಾರ್ವಜನಿಕರು ಭಕ್ತಿಯಿಂದ ರಥಕ್ಕೆ ಸ್ವಾಗತ ಕೋರಿ ಪವಿತ್ರ ಮಣ್ಣು ಅರ್ಪಣೆ ಮಾಡಬೇಕು’ ಎಂದರು.

ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಸಣ್ಣ ಪುಟ್ಟ ಗ್ರಾಮಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿ ಜೀವನ ಕಟ್ಟಿಕೊಂಡವರು ಬಹಳ ಜನ ಇದ್ದಾರೆ. ಇಂತಹ ಅವಕಾಶ ಕಲ್ಪಿಸಿಕೊಟ್ಟ ನಾಡಪ್ರಭು ಕೆಂಪೇಗೌಡರ ಹೆಸರು ಸದಾ ಸ್ಮರಣೀಯವಾಗಿರಬೇಕು. ಈ ಉದ್ದೇಶಕ್ಕಾಗಿ ಅತೀ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ’ ಎಂದರು.

‘ಬೆಂಗಳೂರು ಇಂದು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಸಿಲಿಕಾನ್ ವ್ಯಾಲಿ ಎಂಬ ಗರಿಮೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ ಆಯೋಜನೆ ಮಾಡಲಾಗುತ್ತದೆ. ಇದಕ್ಕೆಲ್ಲ ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ’ ಎಂದರು.

ಕಾಳಿಕಾಂಬ ದೇವಸ್ಥಾನದಿಂದ ಪವಿತ್ರ ಮೃತ್ತಿಕೆ ಸಂಗ್ರಹಿಸಿ ನಾಡಪ್ರಭು ಕೆಂಪೇಗೌಡರ ರಥಕ್ಕೆ ಸಮರ್ಪಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಆದಿ ಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಜಂಗಮ ಮಠದ ರೇಣುಕಾಶಿವಚಾರ್ಯ ಸ್ವಾಮೀಜಿ, ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಜಿ.ಪಂ. ಸಿಇಒ ಶಾಂತಾ ಎಲ್.ಹುಲ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.