ಶ್ರೀರಂಗಪಟ್ಟಣ: ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಲಕ್ಷ್ಮೀನಾರಾಯಣಸ್ವಾಮಿ ದೇವರ ಬ್ರಹ್ಮ ರಥೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.
ಲಕ್ಷ್ಮೀನಾರಾಯಣಸ್ವಾಮಿ ದೇವರ ಉತ್ಸವ ಮೂರ್ತಿಗೆ ಅಗ್ರ ಪೂಜೆ ಸಲ್ಲಿಸಿದ ಬಳಿಕ ಅದನ್ನು ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 11.30ಕ್ಕೆ ಮಿಥುನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಸಹಿತ ರಥೋತ್ಸವ ಜರುಗಿತು. ಭಕ್ತರು ಶ್ರದ್ಧೆ, ಭಕ್ತಿಯಿಂದ ರಥವನ್ನು ಎಳೆದರು. ರಥವನ್ನು ಎಳೆಯುವಾಗ ‘ನಾರಾಯಣ, ಗೋವಿಂದ’ ಇತ್ಯಾದಿ ಘೋಷಣೆಗಳು ಕೇಳಿ ಬಂದವು. ರಥಕ್ಕೆ ಹಣ್ಣು, ದವನ ಎಸೆದರು. ಅಲ್ಲಲ್ಲಿ ಕರ್ಪೂರದ ಆರತಿ, ಈಡುಗಾಯಿ ಸೇವೆಗಳು ನಡೆದವು.
ಇದಕ್ಕೂ ಮುನ್ನ ಬ್ರಹ್ಮ ರಥಾರೋಹಣ, ರಥ ಪ್ರತಿಷ್ಠೆ, ಮಂಟಪ ಸೇವೆ ಇತರ ಕೈಂಕರ್ಯಗಳು ಜರುಗಿದವು. ಶೇಷ ವಾಹನೋತ್ಸವ, ಹಂಸ ವಾಹನೋತ್ಸವ, ಕಲ್ಯಾಣೋತ್ಸವ, ದೊಡ್ಡ ಗರುಡೋತ್ಸವ, ಗಜೇಂದ್ರ ಮೋಕ್ಷ, ಮುತ್ತಿನ ಪಲ್ಲಕ್ಕಿ ಉತ್ಸವ, ಮೂಲ ದೇವರಿಗೆ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ ಜರುಗಿದವು.
ಬೆನಕ ಗೋಲ್ಡ್ ಕಂಪನಿಯ ವ್ಯವಸ್ಥಾಪಕ ಶಂಕರ್ ಇತರರಿಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಕೊಡಿಯಾಲ ಮತ್ತು ಆಸುಪಾಸಿನ ಗ್ರಾಮಗಳ ಭಕ್ತರು ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮಂಡ್ಯ ಇತರ ಕಡೆಗಳಿಂದಲೂ ರಥೋತ್ಸವಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ಏ.13ರಂದು ಬೆಳಿಗ್ಗೆ 9 ಗಂಟೆಗೆ ಚಿತ್ತಾ ನಕ್ಷತ್ರದಲ್ಲಿ ನಿತ್ಯ ಹೋಮ, ರಾತ್ರಿ ಲಕ್ಷ್ಮೀನಾರಾಯಣ ದೇವರ ಶಯನೋತ್ಸವ ನಡೆಯಲಿದೆ ಎಂದು ರಥೋತ್ಸವ ಆಚರಣಾ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.