ADVERTISEMENT

ಕೆ.ಆರ್.ಪೇಟೆ| ಕಟ್ಟಡ ಸಂಕೀರ್ಣ ನಿರ್ಮಾಣ: ಪರಸ್ಪರ ದೂರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 13:37 IST
Last Updated 18 ಜೂನ್ 2023, 13:37 IST

ಕೆ.ಆರ್.ಪೇಟೆ: ‘ ಹೊನ್ನೇನಹಳ್ಳಿ - ಹೆಮ್ಮನಹಳ್ಳಿ ಗೇಟ್ ಬಳಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣದ ಕಾಮಗಾರಿಗೆ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಮತ್ತು ಸಹಚರರು ತಡೆಯೊಡ್ಡಿ, ಹಲ್ಲೆ ನಡೆಸಿ ಪ್ರಾಣಬೆದರಿಕೆ ಹಾಕಿದ್ದಾರೆ’ ಎಂದು ಸಾಸಲು ಗ್ರಾಮದ ವಿದ್ಯಾ ಮತ್ತು ಷಣ್ಮುಖ ದಂಪತಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪಟ್ಟಣ ಪೊಲೀಸ್ ಠಾಣೆಯಲ್ಲಿ ವೇಣು ಸೇರಿದಂತೆ ಆರು ಜನರ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

‘ಕಾನೂನುಬದ್ಧವಾಗಿ ನಿವೇಶನ ಖರೀದಿ ಮಾಡಿ, ಮುರುಕನಹಳ್ಳಿ ಗ್ರಾಮ ಪಂಚಾಯಿತಿಯಿಂದ ಲೈಸೆನ್ಸ್ ಪಡೆದು ಕಟ್ಟಡ ಕಾಮಗಾರಿ ನಡೆಸುತ್ತಿರುವ ನಮ್ಮನ್ನು ಹೆದರಿಸಿ– ಬೆದರಿಸಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಘಟನೆಯ ವಿಡಿಯೊ ಮಾಡಿದ್ದ ನಮ್ಮ ಮೊಬೈಲ್‌ ಫೋನ್‌ಗಳನ್ನು ಕಿತ್ತುಕೊಂಡಿದ್ದು, ಅದನ್ನು ಹಿಂತಿರುಗಿಸಿಲ್ಲ’ ಎಂದು ದೂರಿದರು.

ADVERTISEMENT

ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ಮಾತನಾಡಿ, ‘ನಮ್ಮ ಸಮುದಾಯಕ್ಕೆ ಸೇರಿದ ಷಣ್ಮುಖ ಮತ್ತು ವಿದ್ಯಾ ದಂಪತಿಗೆ ಕರವೇ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಹಾಗೂ ಆತನ ಸಹಚರರು ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವುದು ಖಂಡನೀಯ. ಕಟ್ಟಡ ಕಾಮಗಾರಿ ಅಕ್ರಮವಾಗಿದ್ದರೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರಲಿ. ಮೂರು ದಿನದೊಳಗೆ ಪೊಲೀಸರು ಕಾನೂನು ಕ್ರಮಕೈಗೊಳ್ಳದಿದ್ದರೆ ಎಸ್.ಪಿ. ಕಚೇರಿ, ಪಟ್ಟಣ ಠಾಣೆ ಮುಂದೆ ಸಮಾಜದ ಮುಖಂಡರೊಂದಿಗೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಆರೋಪ ನಿರಾಧಾರ

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ‘ನಾನು ವಿದ್ಯಾ–ಷಣ್ಮುಖ ದಂಪತಿ ಮೇಲೆ ಹಲ್ಲೆಯನ್ನೂ ಮಾಡಿಲ್, ಕೊಲೆ ಬೆದರಿಕೆಯನ್ನೂ ಹಾಕಿಲ್ಲ.  ಹಣಕ್ಕೆ ಬೇಡಿಕೆ ಇಟ್ಟಿಲ್ಲ. ನಮ್ಮ ಜಮೀನಿಗೆ ಹೊಂದಿಕೊಂಡಂತೆ ಸರ್ಕಾರಿ ಆಸ್ತಿಯಲ್ಲಿ ಇವರು ಕಟ್ಟಡ ನಿರ್ಮಾಣ ಮಾಡುತಿರುವುದು ನಿಯಮ ಬಾಹಿರ. ಇವರು ಖರೀದಿಸಿರುವ ಜಮೀನಿನಲ್ಲಿ ಕಟ್ಟಡ ನಿರ್ಮಿಸಿದ್ದರೆ ನಮ್ಮ ಆಕ್ಷೇಪವಿಲ್ಲ. ಆದರೆ 8 ಗುಂಟೆ ಭೂಮಿಯನ್ನು ಖರೀದಿಸಿ ಅಲ್ಲಿಯೇ ಇರುವ ಸರ್ಕಾರಿ ಜಮೀನಿಗೂ ಪಿಡಿಒ ಮೂಲಕ ಈ–ಸ್ವತ್ತು ಮಾಡಿಸಿಕೊಂಡು ಕಾನೂನು ಬಾಹಿರವಾಗಿ 12 ಗುಂಟೆ ಜಮೀನಿನಲ್ಲಿ ಕಟ್ಟಡದ ಕಾಮಗಾರಿ ನಡೆಸುತ್ತಿದ್ದಾರೆ. ನನ್ನ ಜಮೀನು ಆಗಿರುವದರಿಂದ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಮಾಡಬೇಡಿ ಎಂದು ಒತ್ತಾಯಿಸಿದ್ದೇವೆ. ಆದರೆ ಇದಕ್ಕೆ ಜಾತಿ ಲೇಪ ಹಚ್ಚಿ ನನ್ನ ಮೇಲೆ ಅನಗತ್ಯ ದೂರು ನೀಡಿದ್ದಾರೆ. ದಂಪತಿಗಳ ವಿರುದ್ಧ ಪಟ್ಟಣ ಠಾಣೆಗೆ ದೂರು ನೀಡಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರೂ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.