ADVERTISEMENT

ಕೆ.ಆರ್.ಪೇಟೆ: ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 16:35 IST
Last Updated 4 ಡಿಸೆಂಬರ್ 2021, 16:35 IST
ಕೆ.ಆರ್.ಪೇಟೆ ತಾಲ್ಲೂಕಿನ ಸಾರಂಗಿ ಸಮೀಪದ ಹಳ್ಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ಸಾರಂಗಿ ಸಮೀಪದ ಹಳ್ಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು   

ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕೈಗೋನಹಳ್ಳಿ ಗ್ರಾಮದ ಯುವಕನೊಬ್ಬ ಸ್ಕೂಟರ್‌ ಸಮೇತ ನೀರಿನಲ್ಲಿ ಕೊಚ್ಚಿಹೋಗಿದ್ದು, ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಕೊಚ್ಚಿ ಹೋದ ಯುವಕನನ್ನು ಕೈಗೋನಹಳ್ಳಿ ಗ್ರಾಮದ ಶಿವಲಿಂಗೇಗೌಡ ಎಂಬವರ ಪುತ್ರ ಉದಯಶಂಕರ್ (27) ಎಂದು ಗುರುತಿಸಲಾಗಿದೆ.

ಮಲ್ಲೇನಹಳ್ಳಿ ಗ್ರಾಮದಿಂದ ಸ್ವಗ್ರಾಮಕ್ಕೆ ವಾಪಾಸಾಗುವಾಗ ಸಾರಂಗಿ ಸಮೀಪ ಇರುವ ಮೇಲುಸೇತುವೆ ಬಳಿಯ ಹಳ್ಳ ದಾಟುವ ವೇಳೆ ನೀರಿನ ರಭಸಕ್ಕೆ ಬಿದ್ದಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಅಗ್ನಿಶಾಮಕ ಠಾಣೆಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಾಚರಣೆ ಪ್ರಾರಂಭಿಸಿದಾಗ ಉದಯಶಂಕರ್ ಅವರ ಸ್ಕೂಟರ್ ಸೇತುವೆಯಿಂದ ನೂರು ಮೀಟರ್ ದೂರದಲ್ಲಿ ನೀರಿನಲ್ಲಿ ಪತ್ತೆಯಾಗಿದೆ.

ADVERTISEMENT

ಶಿವಣ್ಣ ನೇತೃತ್ವದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಉದಯಶಂಕರ್‌ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸೇತುವೆ ನಿರ್ಮಿಸಿ: ಭಾರಿ ಮಳೆ ಬಿದ್ದಾಗ ಸಾರಂಗಿ ಗ್ರಾಮಕ್ಕೆ ಸಂಪರ್ಕ ಸಾಧ್ಯವಾಗುವುದಿಲ್ಲ. ಅಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೋಟ್ ಒದಗಿಸಲು ಮನವಿ: ರಕ್ಷಣಾ ಕಾರ್ಯಾಚರಣೆಗೆ ನಡೆಸಲು ಪಟ್ಟಣದ ಅಗ್ನಿಶಾಮಕ ಇಲಾಖೆಯಲ್ಲಿ ಬೋಟ್ ಇಲ್ಲದೆ ಇರುವುದರಿಂದ ತೊಂದರೆ ಆಗುತ್ತಿದೆ. ತಾಲ್ಲೂಕು ಆಡಳಿತ ವಿಪತ್ತು ಪರಿಹಾರ ನಿಧಿಯಿಂದ ಬೋಟ್‌ ಒದಗಿಸಬೇಕು ಎಂದು ಸಾರ್ವಜನಿಕರು ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.